ಲಾಹೋರ್: ಕಳೆದ ಮೂರು ವಾರಗಳಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನ್ಯುಮೋನಿಯಾದಿಂದ 200ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿವೆ. ತೀವ್ರ ಚಳಿಯ ವಾತಾವರಣದಿಂದಾಗಿ ಈ ಸಾವು ಸಂಭವಿಸಿವೆ ಎಂದು ಸರ್ಕಾರ ಶುಕ್ರವಾರ ದೃಢಪಡಿಸಿದೆ.
ಮೃತಪಟ್ಟ ಹೆಚ್ಚಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರು ಹಾಗೂ ನ್ಯುಮೋನಿಯಾ ಲಸಿಕೆ ಪಡೆದಿರಲಿಲ್ಲ ಎಂದು ಅಲ್ಲಿನ ಸ್ಥಳಿಯ ಸರ್ಕಾರ ಮಾಹಿತಿ ನೀಡಿದೆ.
5 ವರ್ಷದೊಳಗಿನ 220 ಮಕ್ಕಳು ಸಾವು
ಹವಾಮಾನ ವೈಪರೀತ್ಯದ ಕಾರಣ ಈ ಪ್ರಾಂತ್ಯದಲ್ಲಿ ಜನವರಿ 31ರವರೆಗೆ ಬೆಳಿಗ್ಗೆ ತರಗತಿ ನಡೆಸದಂತೆ ಸರ್ಕಾರ ಈಗಾಗಲೇ ಶಾಲೆಗಳಿಗೆ ಸೂಚಿಸಿದೆ. ಜನವರಿ 1ರಿಂದ ಪಂಜಾಬ್ ಪ್ರಾಂತ್ಯದಲ್ಲಿ ಒಟ್ಟು 10,520 ನ್ಯುಮೋನಿಯಾ ಪ್ರಕರಣಗಳು ವರದಿಯಾಗಿವೆ. 220 ಮಕ್ಕಳು ಮೃತಪಟ್ಟಿದ್ದು, ಅವರೆಲ್ಲರೂ 5 ವರ್ಷದೊಳಗಿನವರು ಎಂದು ಸರ್ಕಾರ ದೃಢಪಟಿಸಿದೆ. ಪಂಜಾಬ್‌ನ ಪ್ರಾಂತೀಯ ರಾಜಧಾನಿ ಲಾಹೋರ್‌ನಲ್ಲಿ 47 ಮಕ್ಕಳು ಮೃತಪಟ್ಟಿವೆ.
ಆರೋಗ್ಯಾಧಿಕಾರಿ ಮುಖ್ತಾರ್ ಅಹ್ಮದ್ ಮಾತನಾಡಿ, 'ಪಾಕಿಸ್ತಾನದಲ್ಲಿ ಸಾಮಾನ್ಯವಾಗಿ ಆಯಂಟಿ ನ್ಯುಮೋನಿಯಾ ಲಸಿಕೆಯನ್ನು ಜನನದ 6 ವಾರಗಳ ನಂತರ ಶಿಶುಗಳಿಗೆ ನೀಡಲಾಗುತ್ತದೆ. ನ್ಯುಮೋನಿಯಾ ಬ್ಯಾಕ್ಟೀರಿಯಾ ಮತ್ತು ವೈರಸ್ ಎರಡರಿಂದಲೂ ಉಂಟಾಗಬಹುದು. ಲಸಿಕೆ ಹಾಕಿದ ಮಕ್ಕಳು ಬ್ಯಾಕ್ಟೀರಿಯಾದ ಸೋಂಕಿನಿಂದ ರಕ್ಷಿಸಲ್ಪಡುತ್ತಾರೆ ಆದರೆ ಅವರು ವೈರಲ್ ನ್ಯುಮೋನಿಯಾದಿಂದ ಪ್ರಭಾವಿತರಾಗಬಹುದು' ಎಂದು ಹೇಳಿದ್ದಾರೆ.
ಮಕ್ಕಳಲ್ಲಿ ನ್ಯುಮೋನಿಯಾ ಪ್ರಕರಣಗಳ ಹೆಚ್ಚಳದ ಬಗ್ಗೆ ಅಲ್ಲಿನ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಮಕ್ಕಳಿಗೆ ನ್ಯುಮೋನಿಯಾ ಬಾರದಂತೆ ತಡೆಯಲು ಮಾಸ್ಕ್ ಧರಿಸಿ, ಸ್ವಚ್ಛವಾಗಿ ಕೈತೊಳೆದುಕೊಳ್ಳುವಂತೆ ಹಾಗೂ ಬೆಚ್ಚಗಿನ ಬಟ್ಟೆ ಧರಿಸುವಂತೆ ಸೂಚಿಸಿದೆ.
ಕೋವಿಡ್ -19 ನಂತೆ ಹರಡುತ್ತಿರುವ ನ್ಯುಮೋನಿಯಾ
ಕಳೆದ ವರ್ಷ ಪಂಜಾಬ್‌ನಲ್ಲಿ 990 ಮಕ್ಕಳು ನ್ಯುಮೋನಿಯಾದಿಂದ ಮೃತಪಟ್ಟಿದ್ದರು. ಸೋಂಕಿನಿಂದ ಮಕ್ಕಳನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಸರ್ಕಾರ ಹಿರಿಯ ವೈದ್ಯರಿಗೆ ಸೂಚಿಸಿದೆ. ಶೀತ ವಾತಾವರಣದಿಂದ ಮಕ್ಕಳಲ್ಲಿ ವೈರಲ್ ನ್ಯುಮೋನಿಯಾ ರೋಗ ವೇಗವಾಗಿ ಹೆಚ್ಚುತ್ತಿವೆ. ಈ ರೋಗವು ಕೋವಿಡ್ -19 ನಂತೆ ಹರಡುತ್ತದೆ ಎಂದೂ ಸರ್ಕಾರ ಹೇಳಿದೆ.