ನವದೆಹಲಿ :ಮಾಲ್ದೀವ್ಸ್ ವಿವಾದವು ಪ್ರಾಚೀನ ಸಮುದ್ರ ತೀರಗಳು ಹಾಗೂ ಕಣ್ಮನ ಸೆಳೆಯುವ ಸಾಗರದ ದೃಶ್ಯಗಳನ್ನು ಹೊಂದಿರುವ ಲಕ್ಷದ್ವೀಪವನ್ನು ಪ್ರವಾಸಿಗಳ ಪಾಲಿಗೆ ಪರ್ಯಾಯ ಪ್ರವಾಸಿ ತಾಣವಾಗಿಸುವ ಕುರಿತು ಬೆಳಕು ಚೆಲ್ಲಿದೆ. ಸದ್ಯ ಲಕ್ಷದ್ವೀಪವು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗುತ್ತಿದ್ದರೂ, ಅದನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವ ಯೋಜನೆಯು ಹೊಸದಲ್ಲ ಎಂಬುದು ಗಮನಾರ್ಹ.
ಲಕ್ಷದ್ವೀಪ ಆಡಳಿತವು ಲಕ್ಷದ್ವೀಪ ಪ್ರವಾಸೋದ್ಯಮ ನೀತಿ 2020 ಅನ್ನು ಈಗಾಗಲೇ ಮಂಡಿಸಿದ್ದು, ಆ ವರದಿಯಲ್ಲಿ ಸಮಸ್ಯೆಗಳು ಹಾಗೂ ಕ್ರಿಯಾ ಯೋಜನೆಗಳ ಕುರಿತು ವಿಸ್ತೃತವಾಗಿ ವಿವರಿಸಲಾಗಿದೆ. ಇದಲ್ಲದೆ, ಲಕ್ಷದ್ವೀಪಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಾಗೂ ಸದ್ಯ ಮುಂದುವರಿಯುತ್ತಿರುವ ಮಾಲ್ದೀವ್ಸ್ ವಿವಾದವು ಅದರ ಅಭಿವೃದ್ಧಿ ಯೋಜನೆಗಳನ್ನು ಅನ್ವೇಷಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಕಳೆದ ದಶಕದಲ್ಲಿ ಲಕ್ಷದ್ವೀಪ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಪ್ರವಾಸೋದ್ಯಮವು ಸಾಧಾರಣವಾಗಿತ್ತು. ಉತ್ತಮ ಸಂಪರ್ಕ ವ್ಯವಸ್ಥೆ ಮತ್ತು ಮೂಲಭೂತ ಸೌಕರ್ಯವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದತ್ತ ಹೆಚ್ಚು ಪ್ರವಾಸಿಗಳನ್ನು ಆಕರ್ಷಿಸುತ್ತಿದ್ದು, ಅದಕ್ಕೆ ಹೋಲಿಸಿದರೆ ಲಕ್ಷದ್ವೀಪಕ್ಕೆ ಭೇಟಿ ನೀಡುವ ಪ್ರವಾಸಿಗಳ ಸಂಖ್ಯೆ ತೀರಾ ಕಡಿಮೆ ಇದೆ. ಲಕ್ಷದ್ವೀಪಕ್ಕೆ ಆಗಮಿಸುತ್ತಿರುವ ಸ್ವದೇಶಿ ಮತ್ತು ವಿದೇಶಿ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದರೂ, ಕೋವಿಡ್-19 ಸಾಂಕ್ರಾಮಿಕವು ಅದಕ್ಕೆ ದೊಡ್ಡ ಹೊಡೆತ ನೀಡಿದೆ. ಹೀಗಿದ್ದೂ, ಎರಡೂ ದ್ವೀಪಗಳಲ್ಲಿ ಪ್ರವಾಸೋದ್ಯಮವು ಚೇತರಿಸಿಕೊಳ್ಳುತ್ತಿದೆ.
ದುರದೃಷ್ಟವಶಾತ್, ಈಗಲೂ ಕೂಡಾ ಎರಡೂ ದ್ವೀಪಗಳಿಗೆ ಧಾವಿಸುತ್ತಿರುವ ಪ್ರವಾಸಿಗರ ಸಂಖ್ಯೆ ಭಾರತದ ಭೂಪ್ರದೇಶಕ್ಕೆ ಹೋಲಿಸಿದರೆ ಶೇ. 0.2ಗಿಂತಲೂ ಕಡಿಮೆ ಇದೆ.
ಲಕ್ಷದ್ವೀಪಕ್ಕೆ ಭೇಟಿ ನೀಡಲು ಪ್ರವಾಸಿಗರಿಗೆ ಅಡ್ಡಿಯಾಗಿರುವ ಸಂಗತಿ ಯಾವುದು?
ಲಕ್ಷದ್ವೀಪ ಪ್ರವಾಸೋದ್ಯಮ ನೀತಿ 2020 ಭಾರತದ ಭೂಪ್ರದೇಶ ನಡುವಿನ ಸಂಪರ್ಕ, ವಸತಿಯ ಲಭ್ಯತೆ, ಅಂತರ್ಜಾಲ ಸಂಪರ್ಕ ಹಾಗೂ ಕೆಟ್ಟ ಮಾರುಕಟ್ಟೆಯು ಲಕ್ಷದ್ವೀಪದಲ್ಲಿನ ಪ್ರವಾಸೋದ್ಯಮ ಹಿನ್ನಡೆಗೆ ಪ್ರಮುಖ ಕಾರಣ ಎಂಬುದರತ್ತ ಬೆಳಕು ಚೆಲ್ಲಿದೆ. ವೃತ್ತಿಪರತೆಯ ಕೊರತೆ, ಅಂದರೆ, ಚೆನ್ನಾಗಿ ತರಬೇತಾಗಿರುವ ಮತ್ತು ಕೌಶಲ ಮಾನವ ಸಂಪನ್ಮೂಲದ ಕೊರತೆಯೂ ಈ ಹಂತದಲ್ಲಿ ಪ್ರಮುಖ ಹಿನ್ನಡೆಯಾಗಿದೆ.
ಇದರೊಂದಿಗೆ, ಶುದ್ಧ ಕುಡಿಯುವ ನೀರು ಹಾಗೂ ಅಡೆತಡೆಯಿಲ್ಲದ ವಿದ್ಯುತ್ ಪೂರೈಕೆಯ ಕೊರತೆಯಂಥ ಮೂಲಭೂತ ಸೌಕರ್ಯಗಳೂ ಕೂಡಾ ಪ್ರವಾಸಿಗರ ಸಮಸ್ಯೆಗೆ ಸೇರ್ಪಡೆಯಾಗಿವೆ.
ಪ್ರವಾಸೊದ್ಯಮವನ್ನು ಉತ್ತೇಜಿಸುವ ಗುರಿಯನ್ನು ಲಕ್ಷದ್ವೀಪ ಹೇಗೆ ಹೊಂದಿದೆ?
2020ರ ಹೊತ್ತಿಗೆ ಲಕ್ಷದ್ವೀಪದಲ್ಲಿ 184 ಹಾಸಿಗೆಯ ಸಾಮರ್ಥ್ಯವಿರುವ ವಸತಿ ವ್ಯವಸ್ಥೆ ಮಾತ್ರ ಇತ್ತು. ಈಗಿನ ಬೆಳವಣಿಗೆಯಲ್ಲಿ ಲಕ್ಷದ್ವೀಪ ಪ್ರಾಧಿಕಾರವು ಪ್ರವಾಸಿ ನಿವಾಸಗಳು ಹಾಗೂ ಪರಿಸರ ಸ್ನೇಹಿ ರೆಸಾರ್ಟ್ ಗಳನ್ನು ಉತ್ತೇಜಿಸುವ ಗುರಿ ಹೊಂದಿದೆ. ಇದಲ್ಲದೆ, ಜನವಸತಿ ಇಲ್ಲದ ದ್ವೀಪಗಳಿಗೂ ಪ್ರವಾಸೋದ್ಯಮವನ್ನು ಉತ್ತೇಜಿಸಬೇಕಿದೆ. ಇದರಿಂದ ಸೂರ್ಯ, ಸಮುದ್ರ, ಹವಳಗಳು, ಸರೋವರಗಳನ್ನು ಆಧರಿಸಿರುವ, ಮೂಲನಿವಾಸಿಗಳ ಕಟ್ಟುನಿಟ್ಟಿನ ಸಾಮಾಜಿಕ ಪದ್ಧತಿಗಳು ಹಾಗೂ ಸಂಪ್ರದಾಯಗಳನ್ನು ಕದಡದಂಥ ಅಂತಾರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ಇದು ಸೂಕ್ತವಾಗಿದೆ.
ದ್ವೀಪದ ಅಭಿವೃದ್ಧಿಗೆ ವೇಗ ನೀಡಲು ನೀತಿ ಆಯೋಗ ಮತ್ತು ಲಕ್ಷದ್ವೀಪ ಆಡಳಿತವು ಸಾರ್ವಜನಿಕ-ಖಾಸಗಿ ಸಹಭಾಗಿತ್ವಕ್ಕೂ ಸಮ್ಮತಿಸಿವೆ. ದ್ವೀಪದ ನೀರಿನ ಬಳಿ ವಿಲ್ಲಾ ರೆಸಾರ್ಟ್ ನಿರ್ಮಿಸಲು ಈಗಾಗಲೇ ಮೂರು ಪ್ರಮುಖ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಮಾಜಿ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿ20ಯ ಶೆರ್ಪಾ ಅಮಿತಾಭ್ ಕಾಂತ್ ಅವರು, "ನಾವು ಲಕ್ಷದ್ವೀಪದ ಅಭಿವೃದ್ಧಿಗಾಗಿ ಎಂಟು ಒಂಬತ್ತು ವರ್ಷಗಳಿಂದ ಶ್ರಮಿಸುತ್ತಿದ್ದೇವೆ. ಈಗ ನೀವೇನು ನೋಡುತ್ತಿದ್ದೀರಿ ಅದು ಇಂದೇ ಆಗಿರುವುದಲ್ಲ. ಪ್ರಧಾನಿಯು ಈ ಬಗ್ಗೆ ಒತ್ತು ನೀಡಿದ್ದಾರೆ. ನಾವು ದ್ವೀಪಗಳ ಅಭಿವೃದ್ಧಿಗೆ ಸಂಬಂಧಿಸಿದ ಹಲವಾರು ವಿಷಯಗಳ ಕುರಿತು ಕಾರ್ಯಮಗ್ನರಾಗಿದ್ದೇವೆ. ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ ನಮ್ಮ ಗುರಿಯಾಗಿದೆ" ಎನ್ನುತ್ತಾರೆ.
ಇದರೊಂದಿಗೆ ವಿದ್ಯುಚ್ಛಕ್ತಿ ಅಗತ್ಯತೆ ಪೂರೈಕೆಯಲ್ಲಿ ಸ್ವಾವಲಂಬನೆ ಸಾಧಿಸಲು ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸುವ ಪ್ರಸ್ತಾಪಗಳು ಹಾಗೂ ಶುದ್ಧ ಕುಡಿಯುವ ನೀರಿನ ಲಭ್ಯತೆಯನ್ನು ಹೆಚ್ಚಿಸಲು ಮಳೆ ನೀರು ಕೊಯ್ಲು ಯೋಜನೆಗಳನ್ನೂ ಪ್ರಸ್ತಾಪಿಸಲಾಗಿದೆ.
ಆದರೆ, ಸಂಪರ್ಕದ ಸಮಸ್ಯೆಯಿಂದ ಹೊರಬರುವುದು ಪ್ರಮುಖ ಸಂಗತಿಯಾಗಿದೆ. ಭಾರತದ ಭೂಪ್ರದೇಶ ಹಾಗೂ ದ್ವೀಪಗಳ ನಡುವೆ ವಿಮಾನ ಸೇವೆಯನ್ನು ಸುಧಾರಿಸಲು ಲಕ್ಷದ್ವೀಪ ಆಡಳಿತವು ಅಗಟ್ಟಿ ವಿಮಾನ ನಿಲ್ದಾಣವನ್ನು ವಿಸ್ತರಿಸುವ ಪ್ರಸ್ತಾಪ ಮಂಡಿಸಿದೆ.
ಸದ್ಯ, ಪ್ರವಾಸಿಗರ ಪಾಲಿಗೆ ಸಂಪರ್ಕ ವ್ಯವಸ್ಥೆಯೇ ಪ್ರಮುಖ ತೊಡಕಾಗಿದ್ದು, ಎಲ್ಲರಿಗಿಂತಲೂ ಮುಂಚಿತವಾಗಿ ಲಕ್ಷದ್ವೀಪ ಆಡಳಿತವು ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಲಿದೆ.
ಲಕ್ಷದ್ವೀಪಕ್ಕೆ ಪ್ರಯಾಣಿಸಲು ಬಯಸುವ ಪ್ರವಾಸಿಗರು ಶ್ರೀಲಂಕಾ, ಸಿಂಗಪೂರ್, ಥಾಯ್ಲೆಂಡ್, ಮಲೇಶಿಯಾ ಮತ್ತು ವಿಯೆಟ್ನಾಂಗೆ ತೆರಳಲು ಪಾವತಿಸುವಷ್ಟೇ ಮೊತ್ತವನ್ನು ಪಾವತಿಸಬೇಕಿದೆ.
ಯಾವುದೇ ವ್ಯಕ್ತಿ ಹೊಸ ದಿಲ್ಲಿಯಿಂದ ಲಕ್ಷದ್ವೀಪಕ್ಕೆ ತೆರಳಲು ಒಂದು ಬದಿಯ ಟಿಕೆಟ್ ಖರೀದಿಗಾಗಿ ರೂ. 12,800ಕ್ಕಿಂತ ಕಡಿಮೆ ವೆಚ್ಚ ಮಾಡಬೇಕಿದೆ.