ಕಳೆದ ಹಲವಾರು ವರ್ಷಗಳಿಗೆ ಹೋಲಿಸಿದರೆ 2023ರಲ್ಲಿ ಆಗಿರುವ ಒಟ್ಟು ಆರ್ಥಿಕ ನಷ್ಟವು ಹೊಸ ದಾಖಲೆಯನ್ನು ನಿರ್ಮಿಸಿದೆ. 2023ರಲ್ಲಿ ರೂ. 200.92 ಕೋಟಿಯಷ್ಟು ದೊಡ್ಡ ಮೊತ್ತವನ್ನು ಆನ್ ಲೈನ್ ವಂಚಕರು ಕೇರಳದಿಂದ ದೋಚಿದ್ದಾರೆ. 2020ರಲ್ಲಿ ರೂ. 10,000ದಷ್ಟಿದ್ದ ವಂಚನೆಯ ಮೊತ್ತವು 2021ರಲ್ಲಿ ರೂ. 10.74 ಲಕ್ಷಕ್ಕೆ ಏರಿಕೆಯಾಗಿತ್ತು. ಇದರ ಬೆನ್ನಿಗೇ 2022ರಲ್ಲಿ ರೂ. 48.23 ಲಕ್ಷಕ್ಕೆ ತಲುಪಿತ್ತು. ಆದರೆ, ಈ ಎಲ್ಲ ವರ್ಷಗಳಲ್ಲಿ ವಶಪಡಿಸಿಕೊಳ್ಳಲಾಗಿರುವ ಮೊತ್ತದ ದತ್ತಾಂಶವು ಲಭ್ಯವಿಲ್ಲ.
ಹೈದರಾಬಾದ್ ಮೂಲದ ಹೋರಾಟಗಾರ ರಾಬಿನ್ ವಿನಯ್ ಕುಮಾರ್ ಝ್ಯಾಚ್ಯೂಸ್ ಎಂಬುವವರು ಮಾಹಿತಿ ಹಕ್ಕು ಅರ್ಜಿಯ ಮೂಲಕ ಈ ಎಲ್ಲ ವಿವರಗಳನ್ನು ಕೇರಳ ರಾಜ್ಯ ಅಪರಾಧಗಳ ದಾಖಲೆಗಳ ದಳದಿಂದ ಪಡೆದಿದ್ದಾರೆ.
ಮಾಹಿತಿ ಹಕ್ಕು ಅರ್ಜಿಗೆ ನೀಡಿರುವ ಉತ್ತರದ ಪ್ರಕಾರ, ಎರ್ನಾಕುಲಂ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 2023ರಲ್ಲಿ ಅತ್ಯಧಿಕ ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ (1,947). ಇದರ ನಂತರ ಕ್ರಮವಾಗಿ ಪಾಲಕ್ಕಾಡ್ ಪೊಲೀಸ್ ಠಾಣೆ (1,900) ಹಾಗೂ ಎರ್ನಾಕುಲಂ ನಗರ ಪೊಲೀಸ್ ಠಾಣೆ(1,712)ಗಳಲ್ಲಿ ಅಧಿಕ ಪ್ರಕರಣಗಳು ದಾಖಲಾಗಿವೆ. ಆದರೆ, ಕಣ್ಣೂರು ಪೊಲೀಸ್ ಠಾಣೆಯು ತನ್ನ 2022ರ ದಾಖಲೆಯನ್ನು 2023ರಲ್ಲೂ ಕಾಯ್ದುಕೊಂಡಿದ್ದು, ಈ ಪೊಲೀಸ್ ಠಾಣೆಯಲ್ಲಿ ಈ ಬಾರಿಯೂ ಶೂನ್ಯ ಪ್ರಕರಣಗಳು ದಾಖಲಾಗಿವೆ.
ಕಳೆದ ಹಲವು ವರ್ಷಗಳಲ್ಲಿನ ಆರ್ಥಿಕ ಸೈಬರ್ ಅಪರಾಧಗಳ ಅಂಕಿ-ಸಂಖ್ಯೆಗಳನ್ನು ಹೋಲಿಸಿ ನೋಡಿದಾಗ, ಕೇರಳದ ಬಹುತೇಕ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸೈಬರ್ ಅಪರಾಧ ಪ್ರವೃತ್ತಿಯು ಏರುಮುಖದಲ್ಲಿರುವುದು ಕಂಡು ಬಂದಿದೆ. 2019ರಲ್ಲಿ ದಾಖಲಾಗಿದ್ದ ಒಟ್ಟಾರೆ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆಯು ಕೇವಲ 125 ಆಗಿದ್ದರೆ, 2021ರಲ್ಲಿ 3,991, 2022ರಲ್ಲಿ 9,518 ಹಾಗೂ 2023ರಲ್ಲಿ ದಾಖಲೆಯ 20,569 ಪ್ರಕರಣಗಳು ದಾಖಲಾಗಿವೆ. 2019ರಲ್ಲಿ ಕೇವಲ ಒಂದು ಪ್ರಕರಣ ವರದಿಯಾಗಿದ್ದ ವಯನಾಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2023ರಲ್ಲಿ 262 ಪ್ರಕರಣಗಳು ದಾಖಲಾಗಿವೆ.
ಕಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶೂನ್ಯ ಆರ್ಥಿಕ ವಂಚನೆ ಪ್ರಕರಣಗಳು ವರದಿಯಾಗಿದ್ದರೂ, ಕಣ್ಣೂರು ನಗರ ಪೊಲೀಸ್ ಠಾಣೆ (2022ರಲ್ಲಿ 281, 2023ರಲ್ಲಿ 585) ಹಾಗೂ ಕಣ್ಣೂರು ಗ್ರಾಮೀಣ ಪೊಲೀಸ್ ಠಾಣೆ(2022-117, 2023ರಲ್ಲಿ 366)ಗಳೆರಡೂ ಅಪರಾಧ ಪ್ರಕರಣಗಳ ಏರಿಕೆಗೆ ಸಾಕ್ಷಿಯಾಗಿವೆ.