ನವದೆಹಲಿ: 2024ರ ಜನವರಿ 26ರಂದು ಕರ್ತವ್ಯ ಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಎಲ್ಲಾ ಮಹಿಳಾ ತ್ರಿ-ಸೇನಾ ತುಕಡಿ ಮೆರವಣಿಗೆ ನಡೆಸಲಿದೆ.
'ಭಾರತೀಯ ಸಶಸ್ತ್ರ ಪಡೆಗಳ ಏಕೀಕರಣವನ್ನು ಪ್ರದರ್ಶಿಸುವ ಪರೇಡ್ ಅನ್ನು ಮುನ್ನಡೆಸುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ.
148 ಸದಸ್ಯರ ತಂಡವು ಐತಿಹಾಸಿಕ ಕ್ಷಣಕ್ಕಾಗಿ ತಯಾರಿ ನಡೆಸಲು ಡಿಸೆಂಬರ್ ಆರಂಭದಿಂದಲೂ ದೆಹಲಿಯಲ್ಲಿದೆ. ಅದಕ್ಕೂ ಮೊದಲು, ಅವರು ತಮ್ಮ ಸ್ಥಳಗಳಲ್ಲಿ ಎರಡು ತಿಂಗಳ ಕಾಲ ಅಭ್ಯಾಸ ನಡೆಸಿದ್ದಾರೆ.
2017ರಲ್ಲಿ ದೆಹಲಿ ನಿರ್ದೇಶನಾಲಯದ ಎನ್‌ಸಿಸಿ ಕೆಡೆಟ್ ಆಗಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕ್ಯಾಪ್ಟನ್ ಸಂಧ್ಯಾ ಭಾಗವಹಿಸಿದ್ದರು. ಪ್ರತಿ ಹೆಜ್ಜೆಯಲ್ಲೂ ನಾರಿ ಶಕ್ತಿಯನ್ನು ಪ್ರದರ್ಶಿಸುವುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳಿದರು.
ಮೂರು ಸೇನೆಗಳಲ್ಲಿ ಡ್ರಿಲ್ ಮತ್ತು ಕಾರ್ಯವಿಧಾನಗಳು ವಿಭಿನ್ನವಾಗಿರುವುದರಿಂದ ನೌಕಾಪಡೆ ಮತ್ತು ವಾಯುಪಡೆಯಿಂದ ಬರುವ ಮಹಿಳಾ ಸೈನಿಕರು ಆರಂಭದಲ್ಲಿ ಕೆಲ ಸವಾಲು ಎದುರಿಸಿದರು. ಆದರೆ ನಾವೆಲ್ಲರೂ ಚೆನ್ನಾಗಿ ಅಭ್ಯಾಸ ಮಾಡಿದ್ದೇವೆ. ಜನವರಿ 23ರಂದು ಸಂಪೂರ್ಣ ಉಡುಗೆ ಸಹಿತ ಪೂರ್ವಾಭ್ಯಾಸ ನಡೆಸಲು ಸಿದ್ಧರಾಗಿದ್ದೇವೆ ಎಂದು ಸಂಧ್ಯಾ ಹೇಳಿದರು.
ರಾಷ್ಟ್ರದ ಪ್ರಗತಿಯಲ್ಲಿ ಮಹಿಳೆಯರು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಮತ್ತು ಅಪಾರ ಸಾಮರ್ಥ್ಯವನ್ನು ಹೊಂದಿದ್ದಾರೆ. ಸರ್ಕಾರ ಮಹಿಳಾ ಸೈನಿಕರನ್ನು ರಕ್ಷಣಾ ಸೇವೆಗಳಲ್ಲಿ ಸೇರಿಸಲು ಪ್ರಾರಂಭಿಸಿರುವುದರಿಂದ, ಈ ಐತಿಹಾಸಿಕ ದಿನದ ಭಾಗವಾಗಲು ನನಗೆ ಅವಕಾಶ ಸಿಕ್ಕಿದೆ ಎಂದೂ ಅವರು ಹೇಳಿದರು.
ದೇಶದ ಇತಿಹಾಸದಲ್ಲಿ ಇದೇ ಮೊದಲು:
ಮೂರು ಸೇನೆಗಳ ಮಹಿಳಾ ಸೈನಿಕರು ಕರ್ತವ್ಯ ಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸಾಗಲಿದ್ದಾರೆ. ದೇಶದ ಇತಿಹಾಸದಲ್ಲಿ ಇದೇ ಮೊದಲು ಎಂದು ಅವರು ಹೇಳಿದರು.
ಅಧಿಕಾರಿಗಳ ಪ್ರಕಾರ, ಜನವರಿ 26ರಂದು ಭವ್ಯವಾದ ಕರ್ತವ್ಯ ಪಥದಲ್ಲಿ 75ನೇ ಗಣರಾಜ್ಯೋತ್ಸವವು ಮಹಿಳಾ ಕೇಂದ್ರಿತ ಆಗಿರುತ್ತದೆ. ಅಲ್ಲದೇ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಸಂಕಲ್ಪ ಹೊಂದಿದೆ.
ಭಾರತೀಯ ಸಂಗೀತ ವಾದ್ಯಗಳೊಂದಿಗೆ 100 ಮಹಿಳಾ ಕಲಾವಿದರು ಮೆರವಣಿಗೆಗೆ ನಾಂದಿ ಹಾಡಲಿದ್ದಾರೆ ಎಂದು ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ಶುಕ್ರವಾರ ತಿಳಿಸಿದ್ದಾರೆ.
'ವಿಕಸಿತ ಭಾರತ ಮತ್ತು ಭಾರತ ಲೋಕತಂತ್ರ ಕಿ ಮಾತೃಕಾ' ಪರಿಕಲ್ಪನೆಯೊಂದಿಗೆ, ಜನವರಿ 26ರಂದು ಕರ್ತವ್ಯ ಪಥದಲ್ಲಿ ನಡೆಯುವ 75ನೇ ಗಣರಾಜ್ಯೋತ್ಸವ ಪರೇಡ್ ಮಹಿಳಾ ಕೇಂದ್ರಿತವಾಗಿರುತ್ತದೆ. ಮೆರವಣಿಗೆಯ ಪ್ರಮುಖ ತುಕಡಿಯನ್ನು ಮಹಿಳೆಯರೇ ಮುನ್ನಡೆಸಲಿದ್ದಾರೆ ಎಂದೂ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಇಸ್ರೋದ ಮಹಿಳಾ ಬಾಹ್ಯಾಕಾಶ ವಿಜ್ಞಾನಿಗಳು, ಯೋಗ ಶಿಕ್ಷಕರು (ಆಯುಷ್ಮಾನ್ ಭಾರತ್), ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ವಿಜೇತರು ಮತ್ತು ಪ್ಯಾರಾಲಿಂಪಿಕ್ಸ್ ಪದಕ ವಿಜೇತರು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.