ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಷ್ಟ್ರ ರಾಜಕಾರಣದಲ್ಲಿ ಹೊಸ ಇತಿಹಾಸ ಒಂದನ್ನು ಬರೆಯಲು ಸಜ್ಜಾಗಿದ್ದು, ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಇದರೊಂದಿಗೆ ಹಲವು ದಾಖಲೆಗಳು ಅವರ ಪಾಲಾಗಲಿವೆ.
ಫೆಬ್ರವರಿ 01ರಂದು ಕೇಂದ್ರ ಹನಕಅಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ ಆರನೇ ಬಾರಿಗೆ ಬಜೆಟ್ ಮಂಡಿಸಲಿದ್ದು, ಜುಲೈ 2019 ರಿಂದ ಸತತ ಐದು ಬಾರಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ ಮಹಿಳಾ ಹಣಕಾಸು ಸಚಿವರಾಗಿದ್ದಾರೆ.
ಮಾಜಿ ಹಣಕಾಸು ಸಚಿವರಾದ ಮನಮೋಹನ್ ಸಿಂಗ್, ಅರುಣ್ ಜೇಟ್ಲಿ, ಪಿ ಚಿದಂಬರಂ ಮತ್ತು ಯಶವಂತ್ ಸಿನ್ಹಾ ಸತತ ಐದು ಬಜೆಟ್ ಮಂಡಿಸಿದ್ದರು. ಹಣಕಾಸು ಮಂತ್ರಿಯಾಗಿ, ದೇಸಾಯಿ 1959-1964 ರ ನಡುವೆ ಐದು ವಾರ್ಷಿಕ ಬಜೆಟ್ ಮತ್ತು ಒಂದು ಮಧ್ಯಂತರ ಬಜೆಟ್ ಮಂಡಿಸಿದ್ದರು.
ಫೆಬ್ರವರಿ 1 ರಂದು ಮಂಡಿಸಲಿರುವ 2024-25 ರ ಹಣಕಾಸು ವರ್ಷದ ಮಧ್ಯಂತರ ಬಜೆಟ್ ಏಪ್ರಿಲ್-ಮೇನಲ್ಲಿ ಲೋಕಸಭೆ ಚುನಾವಣೆಯ ನಂತರ ಹೊಸ ಸರ್ಕಾರ ರಚನೆಯಾಗುವವರೆಗೆ ಕೆಲವು ವಸ್ತುಗಳ ಮೇಲೆ ಖರ್ಚು ಮಾಡುವ ಹಕ್ಕನ್ನು ಸರ್ಕಾರಕ್ಕೆ ನೀಡುತ್ತದೆ. ಲೋಕಸಭೆ ಚುನಾವಣೆಯ ನಂತರ, ಜೂನ್‌ನಲ್ಲಿ ಹೊಸ ಸರ್ಕಾರ ರಚನೆಯಾಗುವ ಸಾಧ್ಯತೆಯಿದೆ.
ಹೊಸ ಸರ್ಕಾರವು ಜುಲೈನಲ್ಲಿ 2024-25 ರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದೆ. ಸಾಮಾನ್ಯವಾಗಿ, ಮಧ್ಯಂತರ ಬಜೆಟ್ ಪ್ರಮುಖ ನೀತಿ ಘೋಷಣೆಗಳನ್ನು ಒಳಗೊಂಡಿರುವುದಿಲ್ಲ, ಆದರೆ ಆರ್ಥಿಕತೆ ಎದುರಿಸುತ್ತಿರುವ ಸಮಸ್ಯೆಗಳನ್ನು ಎದುರಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಸರ್ಕಾರಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ.
2019 ರ ಸಾರ್ವತ್ರಿಕ ಚುನಾವಣೆಯ ನಂತರ ಎರಡನೇ ಅವಧಿಯಲ್ಲಿ ಸೀತಾರಾಮನ್ ಅವರಿಗೆ ಹಣಕಾಸು ಇಲಾಖೆಯ ಜವಾಬ್ದಾರಿಯನ್ನು ಮೋದಿ ಸರ್ಕಾರ ವಹಿಸಿತು. ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ನಂತರ ಬಜೆಟ್ ಮಂಡಿಸಿದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ನಿರ್ಮಲಾ ಸೀತಾರಾಮನ್ ಪಾತ್ರರಾದರು. ಇಂದಿರಾ ಗಾಂಧಿಯವರು 1970-71ರ ಆರ್ಥಿಕ ವರ್ಷದ ಬಜೆಟ್ ಮಂಡಿಸಿದ್ದರು.