ಅಯೋಧ್ಯೆ: ಹೊಸ ವರ್ಷವು ವಿಶೇಷವಾದದ್ದು. ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಪವಿತ್ರ ರಾಮ ಮಂದಿರದಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ನೆರವೇರಲಿದೆ. ಹಾಗೆಯೇ ಇದೇ ವರ್ಷ ಸಾರ್ವತ್ರಿಕ ಚುನಾವಣೆಯೂ ನಡೆಯಲಿದೆ. ಈ ಎರಡೂ ಶುಭ ಸೂಚನೆಗಳು ಎಂದು ಶ್ರೀರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ.
ನಗರದ ರಾಮಘಾಟ್ ಪ್ರದೇಶದಲ್ಲಿರುವ ತಮ್ಮ ಮನೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಸತ್ಯೇಂದ್ರ ದಾಸ್, ಅಯೋಧ್ಯೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ಶಾಂತಿ ಮಾತ್ರವಲ್ಲ, 'ರಾಮ ರಾಜ್ಯ'ವೂ ಬರುತ್ತಿದೆ. ಪವಿತ್ರ ಸ್ಥಳದಲ್ಲಿ ಶ್ರೀರಾಮನೂ ನೆಲೆಗೊಳ್ಳಲಿದ್ದಾನೆ. ದುಃಖ, ನೋವು, ಒತ್ತಡಗಳು ದೂರವಾಗಿ, ಎಲ್ಲರೂ ಸಂತಸದಿಂದ ಇರಲಿದ್ದಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಮ ಜನ್ಮಭೂಮಿ ಸ್ಥಳಕ್ಕೆ ತೆರಳಿ 'ಆರತಿ' ಮಾಡುವುದಕ್ಕೂ ಮುನ್ನ ಅವರು, 'ಹೊಸ ವರ್ಷದ ಪ್ರಯುಕ್ತ ದೇಶದ ನಾಗರಿಕರಿಗೆ ಶುಭಾಶಯ ಕೋರುತ್ತಾ ಹಾರೈಸುತ್ತೇನೆ. ಈ ಹೊಸ ವರ್ಷವು ತುಂಬಾ ಮಹತ್ವಪೂರ್ಣವಾದದ್ದು. ಇದೇ ತಿಂಗಳು (ಜನವರಿ) 22ರಂದು ಪವಿತ್ರ ಸ್ಥಳದಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ. ಇದು ದೇಶದ ಜನರಿಗೆ ಶ್ರೇಯಸ್ಕರವಾಗಲಿದೆ. ಶ್ರೀರಾಮನು ಎಲ್ಲರ ಬಾಳಲ್ಲಿ ಸಿಹಿ ತರಲಿದ್ದಾನೆ. ಈ ವರ್ಷ ಶುಭಕರವಾಗಿರಲಿದೆ' ಎಂದು ಅರ್ಚಕ ಅಭಿಪ್ರಾಯಪಟ್ಟಿದ್ದಾರೆ.
ಅಯೋಧ್ಯೆ ತೀರ್ಪು
ಮೊಘಲ್ ದೊರೆ ಬಾಬರ್ ಅಯೋಧ್ಯೆಯಲ್ಲಿದ್ದ ಮಂದಿರವನ್ನು 1528ರಲ್ಲಿ ಧ್ವಂಸ ಮಾಡಿ ಆ ಜಾಗದಲ್ಲಿ ಮಸೀದಿ ನಿರ್ಮಿಸಿದ್ದಾರೆ ಎಂದು ಪ್ರತಿಪಾದಿಸಿದ್ದ ಕರ ಸೇವಕರು, 1992ರ ಡಿಸೆಂಬರ್ 6ರಂದು ಭಾರಿ ಸಂಖ್ಯೆಯಲ್ಲಿ ಜಮಾಯಿಸಿ ಮಸೀದಿಯನ್ನು ಧ್ವಂಸಗೊಳಿಸಿದ್ದರು.
ಇದರಿಂದ ತಲೆದೋರಿದ್ದ ಅಯೋಧ್ಯೆಯ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್, 2019ರ ನವೆಂಬರ್ 9ರಂದು ನೀಡಿತ್ತು. ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆದೇಶಿಸಿತ್ತು.
ಆಗಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರನ್ನೊಳಗೊಂಡ ಐವರು ಸದಸ್ಯರ ನ್ಯಾಯಪೀಠವು, ರಾಮಲಲ್ಲಾನನ್ನೇ ಮುಖ್ಯ ಅರ್ಜಿದಾರ ಎಂದು ಮಾನ್ಯ ಮಾಡಿತ್ತು. ವಿವಾದಿತ ಜಾಗ ರಾಮಲಲ್ಲಾಗೆ ಸೇರಿದ್ದು. ಅಲ್ಲಿ ರಾಮಮಂದಿರ ನಿರ್ಮಿಸಬೇಕು. ಮಂದಿರದ ಹೊಣೆಯನ್ನು ಟ್ರಸ್ಟ್‌ಗೆ ನೀಡಬೇಕು ಎಂದು ಸೂಚಿಸಿತ್ತು.
ಟ್ರಸ್ಟ್ ರಚಿಸಲು, ರಾಮಮಂದಿರ ಕಟ್ಟಲು ಮತ್ತು ಸುನ್ನಿ ವಕ್ಫ್ ಬೋರ್ಡ್‌ಗೆ ಮಸೀದಿ ನಿರ್ಮಿಸಲು ಬೇರೆಡೆ ಪ್ರತ್ಯೇಕ 5 ಎಕರೆ ಭೂಮಿ ನೀಡಲು ಸರ್ಕಾರಕ್ಕೆ ಗಡುವು ವಿಧಿಸಿದ್ದ ಕೋರ್ಟ್, ಬಾಬ್ರಿ ಮಸೀದಿಯನ್ನು ಖಾಲಿ ಜಾಗದಲ್ಲಿ ನಿರ್ಮಿಸಲಾಗಿಲ್ಲ, ವಿವಾದಿತ ಕಟ್ಟಡ ಇಸ್ಲಾಮಿಕ್ ಸಂರಚನೆ ಹೊಂದಿಲ್ಲ ಎಂದೂ ಹೇಳಿತ್ತು.
'ತೀರ್ಪಿನ ಬಳಿಕ ಸಾಕಷ್ಟು ಬದಲಾವಣೆ'
ಕಳೆದುಹೋಗಿರುವ ಶಾಂತಿ ರಾಮ ಮಂದಿರ ನಿರ್ಮಾಣದ ಬಳಿಕ ಮತ್ತೆ ನೆಲೆಸುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸತ್ಯೇಂದ್ರ ದಾಸ್, ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ಐತಿಹಾಸಿಕ ತೀರ್ಪು ಹೊರಬಿದ್ದ ಬಳಿಕ ಅಯೋಧ್ಯೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಸಾಕಷ್ಟು ಅಭಿವೃದ್ಧಿ ಯೋಜನೆಗಳು ಪ್ರಗತಿಯಲ್ಲಿವೆ ಎಂದಿದ್ದಾರೆ.
'ಅಭಿವೃದ್ಧಿ ಕಾರ್ಯಗಳಿಂದ ಅಯೋಧ್ಯೆಗೆ ಅನುಕೂಲವಾಗಿದೆ. ವಿಮಾನ ನಿಲ್ದಾಣ ಬಂದಿದೆ. ಹೊಸ ರೈಲು ನಿಲ್ದಾಣ ನಿರ್ಮಾಣವಾಗಿದೆ. ರಾಮ ಪಥ ಅಭಿವೃದ್ಧಿಗೊಂಡಿದೆ. ಸಾಕಷ್ಟು ರಸ್ತೆಗಳ ನಿರ್ಮಾಣಕ್ಕೆ ಪ್ರಸ್ತಾಪಿಸಲಾಗಿದೆ. ಈ ಯೋಜನೆಗಳಿಂದಾಗಿ ಅಯೋಧ್ಯೆ ಭವ್ಯರೂಪ ಪಡೆದಿದೆ. ಹೊರಗಿನಿಂದ ಸಾಕಷ್ಟು ಜನರು ಬಂದು 'ದರ್ಶನ' ಪಡೆಯಲಿದ್ದಾರೆ' ಎಂದು ವಿವರಿಸಿದ್ದಾರೆ.
ಡಿಸೆಂಬರ್ 30ರಂದು ಅಯೋಧ್ಯೆಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಬೃಹತ್ ರೋಡ್ ಶೋ ನಡೆಸಿದ್ದರು. ಬಳಿಕ, ಮರುಅಭಿವೃದ್ಧಿಗೊಂಡಿರುವ ಅಯೋಧ್ಯ ಧಾಮ ರೈಲು ನಿಲ್ದಾಣ ಹಾಗೂ ಹೊಸದಾಗಿ ನಿರ್ಮಿಸಿರುವ ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನವನ್ನು ಉದ್ಘಾಟಿಸಿದ್ದರು. ಉತ್ತರ ಪ್ರದೇಶದಲ್ಲಿ ₹ 15,000 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೂ ಶಂಕುಸ್ಥಾಪನೆ ನೆರವೇರಿಸಿದ್ದರು.
ಸದ್ಯ ಲೋಕಾರ್ಪಣೆಗೆ ಸಜ್ಜಾಗಿರುವ ರಾಮ ಮಂದಿರ ನಿರ್ಮಾಣಕ್ಕೆ ಮೋದಿ ಅವರು 2020ರ ಆಗಸ್ಟ್ 5ರಂದು ಭೂಮಿ ಪೂಜೆ ನೆರವೇರಿಸಿದ್ದರು.
'ಜೈ ಶ್ರೀರಾಮ್' ಘೋಷದೊಂದಿಗೆ ಹೊಸ ವರ್ಷಕ್ಕೆ ಸ್ವಾಗತ
ಡಿಸೆಂಬರ್ 31ರ ಮಧ್ಯರಾತ್ರಿ ಅಯೋಧ್ಯೆಯ ಲತಾ ಮಂಗೇಶ್ಕರ್ ವೃತ್ತದಲ್ಲಿ ನೆರೆದಿದ್ದ ನೂರಾರು ಮಂದಿ, 'ಜೈ ಶ್ರೀರಾಮ್' ಘೋಷಣೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.
ಹೊಸ ವರ್ಷದ ಮೊದಲ ದಿನದಂದು ಸಾಕಷ್ಟು ಜನರು ಸರಯೂ ನದಿಯಲ್ಲಿ ಪವಿತ್ರ ಸ್ನಾನ ಮಾಡಿ, ರಾಮ ಜನ್ಮಭೂಮಿ ದೇವಾಲಯ ಹಾಗೂ ಹನುಮನಗರಿ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ.
'ಅಕ್ಷತೆ' ನೀಡುವ ಕಾರ್ಯಕ್ರಮಕ್ಕೆ ಚಾಲನೆ
ರಾಮ ಮಂದಿರ ಲೋಕಾರ್ಪಣೆಗೆ ಮುನ್ನುಡಿಯಾಗಿ 'ಅಕ್ಷತೆ' ನೀಡುವ ಕಾರ್ಯಕ್ರಮಕ್ಕೆ ಹೊಸ ವರ್ಷದ ಮೊದಲ ದಿನ ಅಯೋಧ್ಯೆಯಲ್ಲಿ ಚಾಲನೆ ನೀಡಲಾಗಿದೆ. ಅಕ್ಕಿ ಕಾಳುಗಳಿಗೆ ಅರಿಸಿನ ಹಾಗೂ ತುಪ್ಪ ಮಿಶ್ರಣ ಮಾಡಿ ತಯಾರಿಸಿರುವ 'ಅಕ್ಷತೆ' ನೀಡುವ ಪ್ರಕ್ರಿಯೆ ದೇಶದಾದ್ಯಂತ ಜನವರಿ 15ರವರೆಗೆ ನಡೆಯಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.
ದೇಶದಾದ್ಯಂತ ಸುಮಾರು 5 ಲಕ್ಷ ದೇವಾಲಯಗಳ ಸನಿಹದಲ್ಲಿರುವ ಜನರಿಗೆ 'ಅಕ್ಷತೆ' ಜೊತೆಗೆ ರಾಮ ಮಂದಿರದ ಚಿತ್ರ ಹಾಗೂ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಮಾಹಿತಿ ಒಳಗೊಂಡ ಕರಪತ್ರವನ್ನೂ ನೀಡಲು ಉದ್ದೇಶಿಸಲಾಗಿದೆ. ಸುಮಾರು 5 ಕೋಟಿ ಜನರಿಗೆ ಇದನ್ನು ತಲುಪಿಸುವ ಗುರಿ ಇಟ್ಟುಕೊಳ್ಳಲಾಗಿದೆ.