ನವದೆಹಲಿ: ಭಾರತದಲ್ಲಿ ಸಿರಿವಂತರ ಸಂಖ್ಯೆ 2027ರ ಹೊತ್ತಿಗೆ 10 ಕೋಟಿಗೆ ಏರಲಿದೆ ಎಂದು ಗೋಲ್ಡ್ಮನ್ ಸ್ಯಾಚ್ಸ್ ಶುಕ್ರವಾರ ಬಿಡುಗಡೆ ಮಾಡಿದ ವರದಿಯೊಂದರಲ್ಲಿ ತಿಳಿಸಿದೆ. ಅಲ್ಲದೆ, ದುಬಾರಿ ಉತ್ಪನ್ನಗಳನ್ನು ಮಾರಾಟ ಮಾಡುವ ದೇಶೀಯ ಕಂಪನಿಗಳು ಈ ಕ್ಷೇತ್ರದ ವಿದೇಶಿ ಪ್ರತಿಸ್ಪರ್ಧಿಗಳಿಗಿಂತ ಉತ್ತಮ ನಿರ್ವಹಣೆ ತೋರಲಿವೆ ಎಂದೂ ವರದಿ ಹೇಳಿದೆ.
ಹೆಚ್ಚು ಆದಾಯ ಗಳಿಸುವ ಭಾರತೀಯರ ಖರೀದಿ ಶಕ್ತಿ ಕಳೆದೊಂದು ದಶಕದಲ್ಲಿ ಹೆಚ್ಚಾಗಿದೆ. ಬಲಿಷ್ಠ ಆರ್ಥಿಕ ಬೆಳವಣಿಗೆ, ಸ್ಥಿರವಾದ ಹಣಕಾಸು ನೀತಿ ಮತ್ತು ಉನ್ನತ ಸಾಲ ಬೆಳವಣಿಗೆ ಇದಕ್ಕೆ ಕಾರಣವಾಗಿವೆ ಎಂದು ಗೋಲ್ಡ್ಮನ್ ಹೇಳಿದೆ. ಇದರ ಪರಿಣಾಮವಾಗಿ, ವಾರ್ಷಿಕ 8.28 ಲಕ್ಷ ರೂಪಾಯಿಗಿಂತ (10,000 ಡಾಲರ್) ಅಧಿಕ ಆದಾಯ ಗಳಿಸುವವರ ಸಂಖ್ಯೆ 2015ರಲ್ಲಿದ್ದ 2.4 ಕೋಟಿಯಿಂದ ಸದ್ಯಕ್ಕೆ 6 ಕೋಟಿಗೆ ಏರಿದೆ ಎಂದು ವರದಿ ಉಲ್ಲೇಖಿಸಿದೆ. ಪ್ರಸ್ತುತ ಜಗತ್ತಿನ ಐದನೇ ದೊಡ್ಡ ಆರ್ಥಿಕತೆಯಾಗಿರುವ ಭಾರತ, 2017ರ ವೇಳೆಗೆ ಮೂರನೇ ಸ್ಥಾನಕ್ಕೇರಲು ಸಜ್ಜಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ.
ವೆಚ್ಚದ ಶಕ್ತಿ
ಭಾರತದಲ್ಲಿ ಜನರ ವೆಚ್ಚ ಮಾಡುವ ಶಕ್ತಿಯಲ್ಲಿ ಗಣನೀಯ ಏರಿಕೆಯಾಗಿದೆ. ಐಷಾರಾಮಿ ವಸ್ತುಗಳು, ಆಭರಣ, ಆರೋಗ್ಯ ಕಾಳಜಿಯ ಸಾಮಗ್ರಿ ಮುಂತಾದವುಗಳನ್ನು ಮಾರಾಟ ಮಾಡುವ ಪ್ರಮುಖ ಬ್ರಾಂಡ್ಗಳ ಕಂಪನಿಗಳಿಗೆ ಇದರಿಂದ ಲಾಭವಾಗುತ್ತಿರುವುದಾಗಿ ಗೋಲ್ಡ್ಮನ್ ವರದಿಯನ್ನು ಉಲ್ಲೇಖಿಸಿ ಬ್ಲೂಮ್ಗ್ ಹೇಳಿದೆ. ಚಿನ್ನ ಮತ್ತು ಆಸ್ತಿಪಾಸ್ತಿಯನ್ನು ಸಂಪತ್ತಿನ ಸಂಗ್ರಹದ ಪ್ರಮುಖ ವಿಧಾನವಾಗಿ ಪರಿಗಣಿಸಲಾಗುತ್ತಿದೆ. ಷೇರುಗಳು ಅಥವಾ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆಯತ್ತವೂ ಜನರ ಗಮನ ಹೆಚ್ಚಾಗುತ್ತಿದೆ.