ಬದಿಯಡ್ಕ: ಕುಂಬ್ಡಾಜೆ ಉಪ್ಪಂಗಳ ಕಜಮಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೊತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಭಾನುವಾರ ಸಂಜೆ ಕ್ಷೇತ್ರ ಪರಿಸರದಲ್ಲಿ ಜರಗಿತು. ಶ್ರೀ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಬಿಡುಗಡೆಗೊಳಿಸಿ ಮಾತನಾಡಿ, ಕೇವಲ ಒಂದು ವರ್ಷದ ಒಳಗೆ ಜೀರ್ಣೋದ್ಧಾರ ಕಾರ್ಯವನ್ನು ಪೂರ್ತಿಗೊಳಿಸಿ ಬ್ರಹ್ಮಕಲಶದ ಸಿದ್ಧತೆಯನ್ನು ಮಾಡಿರುವುದು ಇಲ್ಲಿನ ಭಕ್ತ ಜನರ ನಂಬಿಕೆಗಳಿಗೆ ಸಾಕ್ಷಿಯಾಗಿದೆ. ದೇವರ ಅನುಗ್ರಹದಿಂದ ಕೆಲಸ ಕಾರ್ಯಗಳು ನೆನೆಸಿದಂತೆ ಕೈಗೂಡಿದೆ. ದೇಶದಲ್ಲಿ ಧರ್ಮಜಾಗೃತಿಯ ಪರ್ವಕಾಲವಾಗಿದೆ. ರಾಮರಾಜ್ಯವೆಂಬ ಕನಸು ಸಾಕಾರವಾಗುವಲ್ಲಿ ಧಾರ್ಮಿಕ ಕ್ಷೇತ್ರಗಳ ಪಾತ್ರ ಮಹತ್ತರವಾಗಿದೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ವೇಣುಗೋಪಾಲ ಕಳೆಯತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಮೊಕ್ತೇಸರ ಉಪ್ಪಂಗಳ ವಾಸುದೇವ ಭಟ್, ಕೆ.ಮಹಾಬಲೇಶ್ವರ ಭಟ್ ಉಪ್ಪಂಗಳ ಕಜೆಮಲೆ, ವಕೀಲ ನಾರಾಯಣ ಭಟ್ ಮವ್ವಾರು, ಉದ್ಯಮಿ ನಿತ್ಯಾನಂದ ಶೆಣೈ ಬದಿಯಡ್ಕ, ರವೀಂದ್ರ ರೈ ಗೋಸಾಡ, ಹರೀಶ ಗೋಸಾಡ, ಸತೀಶ್ ಮಾಸ್ತರ್ ಏತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಹರಿನಾರಾಯಣ ಶಿರಂತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿ, ಉದಯನಾರಾಯಣ ಉಪ್ಪಂಗಳ ವಂದಿಸಿದರು. ಸೂರ್ಯನಾರಾಯಣ ಭಟ್ ಮಾಳಿಗೆಮನೆ ನಿರೂಪಿಸಿದರು.