ಅಯೋಧ್ಯೆ: ದೇಶಾದ್ಯಂತ ತೀವ್ರ ಕುತೂಹಲದಿಂದ ಎದುರು ನೋಡುತ್ತಿರುವ ಅಯೋಧ್ಯೆಯ ರಾಮಮಂದಿರದ ಗರ್ಭ ಗೃಹದಲ್ಲಿ ಜನವರಿ 18 ರಂದು ಶ್ರೀರಾಮನ ವಿಗ್ರಹವನ್ನು ಇಡಲಾಗುವುದು, ಜನವರಿ 22 ರಂದು 12-30ಕ್ಕೆ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಸೋಮವಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಶುಭ ಗಳಿಗೆಯನ್ನು ವಾರಣಾಸಿಯ ಗಣೇಶ್ವರ ಶಾಸ್ತ್ರಿ ದ್ರಾವಿಡ್ ನಿರ್ಧರಿಸಿದ್ದಾರೆ ಎಂದು ಹೇಳಿದರು.
ಧಾರ್ಮಿಕ ವಿಧಿವಿಧಾನಗಳು ಜ.16ರಿಂದ ಆರಂಭವಾಗಲಿದ್ದು, ಜ.21ರವರೆಗೆ ನಡೆಯಲಿದೆ. ಜ.22ರಂದು ‘ಪ್ರಾಣ ಪ್ರತಿಷ್ಠಾ’ ಸಮಾರಂಭ ನಡೆಯಲಿದೆ. ‘ಪ್ರಾಣ ಪ್ರತಿಷ್ಠಾ ಮಾಡುವ ವಿಗ್ರಹವು ಸುಮಾರು 150-200 ಕೆ.ಜಿಯಿದ್ದು, ಜನವರಿ 18 ರಂದು ದೇವಾಲಯದ 'ಗರ್ಭ ಗೃಹದಲ್ಲಿ ಇರಿಸಲಾಗುತ್ತದೆ. ಪ್ರಾಣ ಪ್ರತಿಷ್ಠಾ ಪೂರ್ವ ಸಂಸ್ಕಾರ ಪ್ರಕ್ರಿಯೆಗಳು ಜನವರಿ 16 ರಿಂದ ಪ್ರಾರಂಭವಾಗಲಿದ್ದು, ಜನವರಿ 21 ರವರೆಗೆ ನಡೆಯಲಿವೆ. ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವು ಜನವರಿ 22 ರಂದು ಮಧ್ಯಾಹ್ನ 1 ಗಂಟೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.
"ಜನವರಿ 20 ಮತ್ತು 21 ರಂದು ಸಾರ್ವಜನಿಕರಿಗೆ ದರ್ಶನ ಇರುವುದಿಲ್ಲ. 121 ಆರ್ಚಕರು ಎಲ್ಲಾ ಆಚರಣೆ ಮಾಡುತ್ತಾರೆ. ಗಣೇಶ್ವರ ಶಾಸ್ತ್ರಿ ದ್ರಾವಿಡ್ ಆಚರಣೆಯ ಎಲ್ಲಾ ಪ್ರಕ್ರಿಯೆಗಳ ಮೇಲ್ವಿಚಾರಣೆ, ಸಮನ್ವಯ, ನಿರೂಪಣೆ ಮತ್ತು ನಿರ್ದೇಶನ ಮಾಡಲಿದ್ದು, ಕಾಶಿಯ ಲಕ್ಷ್ಮೀಕಾಂತ್ ದೀಕ್ಷಿತ್ ಪ್ರಧಾನ ಆರ್ಚಕರು ಆಗಿರುತ್ತಾರೆ. ಪ್ರಧಾನಿ ನರೇಂದ್ರ ಮೋದಿಜಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರ ಗಣ್ಯರ ಉಪಸ್ಥಿತಿಯಲ್ಲಿ ಪ್ರಾಣ-ಪ್ರತಿಷ್ಠಾ ಸಮಾರಂಭ ನಡೆಯಲಿದೆ ಎಂದು ಅವರು ಹೇಳಿದರು.
ಭಾರತೀಯ ಆಧ್ಯಾತ್ಮ, ಧರ್ಮ, ಆರಾಧನಾ ಪದ್ಧತಿ, ಸಂಪ್ರದಾಯ, 150ಕ್ಕೂ ಹೆಚ್ಚು ಸಂಪ್ರದಾಯಗಳ ಸಂತರು, ಮಹಾಮಂಡಲೇಶ್ವರರು, ಮಂಡಲೇಶ್ವರರು, ಶ್ರೀಮಹಾಂತರು, ಮಹಂತರು, ನಾಗಾಗಳು ಹಾಗೂ 50ಕ್ಕೂ ಹೆಚ್ಚು ಆದಿವಾಸಿಗಳು, ಗಿರಿವಾಸಿಗಳ ಪ್ರಮುಖರು ಪ್ರಾಣ-ಪ್ರತಿಷ್ಠಾ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.