ಕಾಸರಗೊಡು: 'ಮೋದಿ ಗ್ಯಾರಂಟಿ'ಸಂದೇಶದೊಂದಿಗೆ ಬಿಜೆಪಿ ಕೇರಳ ರಾಜ್ಯ ಸಮಿತಿ ಅಧ್ಯಕ್ಷ ಕೆ. ಸುರೇಂದ್ರನ್ ನೇತೃತ್ವದಲ್ಲಿ ಪಾದಯಾತ್ರೆ ಜ. 27ರಿಂದ ಆರಂಭಗೊಳ್ಳಲಿದೆ. ಕಾಸರಗೋಡಿನಿಂದ ಪ್ರಯಾಣ ಆರಂಭಿಸಲಿರುವ ಜಾಥಾ ಒಂದು ತಿಂಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ತಿರುವನಂತಪುರದಲ್ಲಿ ಸಮಾರೋಪಗೊಳ್ಳಲಿದೆ.
ಪಾದಯಾತ್ರೆ ಜತೆಗೆ ಬಿಜೆಪಿ ಅಭಿವೃದ್ಧಿ ಸಭೆಗಳನ್ನೂ ಆಯೋಜಿಸಲಿದೆ. ಇದರಲ್ಲಿ ಸಮಾಜದ ವಿವಿಧ ಸ್ತರಗಳ ಗಣ್ಯರನ್ನು ಆಹ್ವಾನಿಸಿ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುವುದು. ಯಾತ್ರೆ ಮಧ್ಯೆ ವಿವಿಧೆಡೆ ಸಮ್ಮೇಳನಗಳನ್ನೂ ಆಯೋಜಿಸಲಾಗುವುದು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜನಪರ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ಜಾಥಾ ಆಯೋಜಿಸಲಾಗಿದೆ.
ಕೇಂದ್ರ ಸರ್ಕಾರ ಕೇರಳಕ್ಕೆ ಮಂಜೂರುಮಾಡಿರುವ ವಿವಧ ಯೋಜನೆಗಳು, ಅನುದಾನ, ಜಾರಿಗೊಳಿಸಿರುವ ಅಭಿವೃದ್ಧಿ ಯೋಜನೆಗಳು, ನೆರವಿನ ಬಗ್ಗೆ ಕಾರ್ಯಕ್ರಮದಲ್ಲಿ ವಿವರಿಸಲಾಗುವುದು. ಪಾದಯಾತ್ರೆಯಲ್ಲಿ ಪ. ಜಾತಿ-ಪ.ಪಂಗಡ, ಬುಡಕಟ್ಟು ಜನಾಂಗ ವಾಸಿಸುವ ಪ್ರದೇಶಗಳಿಗೆ ಬಿಜೆಪಿ ನೇತಾರರು ತೆರಳಿ, ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪಟ್ಟಿ ತಯಾರಿಸಿ, ಈ ಬಗ್ಗೆ ವರದಿ ತಯಾರಿಸಲಾಗುವುದು. ರಾಜ್ಯದ ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಅಧ್ಯಯನ ನಡೆಸಲಿದೆ. ಪಕ್ಷ ಆಯೋಜಿಸಿರುವ ಜಾಥಾದಲ್ಲಿ ಕೇಂದ್ರ, ರಾಜ್ಯ ಮುಖಂಡರು ಪಾಲ್ಗೊಳ್ಳುವರು ಎಂದೂ ಬಿಜೆಪಿ ಪ್ರಕಟಣೆ ತಿಳಿಸಿದೆ.