ಕಾಸರಗೋಡು: ಭಾರತೀಯ ಸಂಸ್ಕøತಿಯನ್ನು ಎತ್ತಿಹಿಡಿಯುವಲ್ಲಿ ಇಲ್ಲಿನ ವಿವಿಧ ಕಲಾಪ್ರಾಕಾರಗಳು ಕಾರಣವಾಗಿದೆ. ಈ ನಿಟ್ಟಿನಲ್ಲಿ ಸಂಗೀತ ಕಲಾಸೇವೆಯ ಮೂಲಕ ದೇಶಕ್ಕೆ ಅನನ್ಯ ಕೊಡುಗೆಯನ್ನು ನೀಡಿದ ಈ ಸಂಸ್ಥೆಯು ಇನ್ನಷ್ಟು ಬೆಳಗಲಿ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಕಾಸರಗೋಡು ಲಲಿತ ಕಲಾಸದನದಲ್ಲಿ ಭಾನುವಾರ ಜರಗಿದ ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ 27ನೇ ವಾರ್ಷಿಕೋತ್ಸವಕ್ಕೆ ದೀಪ ಬೆಳಗಿಸಿ ಚಾಲನೆಯನ್ನು ನೀಡಿ ಅವರು ಆಶೀರ್ವಚನವನ್ನು ನೀಡಿದರು.
ಹಿರಿಯ ಸಂಗೀತ ಗುರುಗಳಾದ ಕಲ್ಮಾಡಿ ಸದಾಶಿವ ಆಚಾರ್ಯ ಕಾಸರಗೋಡು ಅವರು ಮಾತನಾಡಿ, ತಾನು ಕಲಿತ ವಿದ್ಯೆಯನ್ನು ತನ್ನ ಶಿಷ್ಯರಿಗೆ ನೀಡುವ ಮೂಲಕ ಗುರುಋಣವನ್ನು ಉಷಾ ಈಶ್ವರ ಭಟ್ ಅವರು ತೀರಿಸುತ್ತಿದ್ದಾರೆ. ಸದ್ಗುಣ ಸಂಪನ್ನ ಶಿಷ್ಯಂದಿರಿಗೆ ವಿದ್ಯೆಯನ್ನು ನೀಡವಲ್ಲಿಯೂ ಆನಂದವಿದೆ. ಗುರುಗಳನ್ನು ಮೀರಿಸುವ ಶಿಷ್ಯಂದಿರು ರೂಪುಗೊಂಡಾಗ ಲಭಿಸುವ ಸಂತೋಷ ಬೇರೆಲ್ಲೂ ಸಿಗದು. ಅಂಥಹ ಉತ್ತಮ ಶಿಷ್ಯಂದಿರನ್ನು ಇವರು ಹೊಂದಿದ್ದಾರೆ ಎಂದರು. ಹಿರಿಯ ನ್ಯಾಯವಾದಿ ಎಂ.ನಾರಾಯಣ ಭಟ್ ಮಾತನಾಡಿ 27 ವರ್ಷಗಳಿಂದ ಕಾಸರಗೋಡಿನಲ್ಲಿ ಕಲಾಸೇವೆಯನ್ನು ನೀಡುತ್ತಾ ಅದ್ಭುತವಾದ ಸಾಧನೆಯನ್ನು ಮಾಡಿದ ಸಂಗೀತಶಾಲೆ ಇದಾಗಿದೆ ಎಂದರು. ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ ಗುರುಗಳಾದ ವಿದುಷಿ ಉಷಾ ಈಶ್ವರ ಭಟ್, ವಿದ್ವಾನ್ ಪ್ರಭಾಕರ ಕುಂಜಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಚಾಲಕ ವಿದ್ವಾನ್ ಈಶ್ವರ ಭಟ್ ಬಿ.ಜಿ. ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿವರಂಜಿನಿ ಪ್ರಾರ್ಥನೆ ಹಾಡಿದರು. ಡಾ. ಶಾಲ್ಮಲಿ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಜರಗಿತು.