ಚೆನ್ನೈ: 'ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಎರಡನೇ ಉಡ್ಡಯನ ಕೇಂದ್ರವನ್ನು ನಿರ್ಮಿಸುವುದು ಶ್ರೀಹರಿಕೋಟಾದಲ್ಲಿನ ಕೇಂದ್ರವನ್ನು ಬದಲಿಸಲು ಅಲ್ಲ. ಬದಲಿಗೆ ಸಣ್ಣ ರಾಕೆಟ್‌ಗಳು ಮತ್ತು ಉಪಗ್ರಹಗಳ ಉಡ್ಡಯನ ಉತ್ತೇಜಿಸಲು ಪರ್ಯಾಯ ತಾಣವನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ' ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮುಖ್ಯಸ್ಥ ಎಸ್. ಸೋಮನಾಥ್ ಭಾನುವಾರ ತಿಳಿಸಿದರು.
ತಮಿಳುನಾಡು ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್‌ನ ಮೂರನೇ ಆವೃತ್ತಿಯ ಅಧಿವೇಶನದಲ್ಲಿ ಮಾತನಾಡಿದ ಸೋಮನಾಥ್, ದೇಶಕ್ಕೆ ಭೌಗೋಳಿಕವಾಗಿ ಅನುಕೂಲಕರವಾದ ಪರ್ಯಾಯ ಉಡ್ಡಯನ ತಾಣದ ಅಗತ್ಯವನ್ನು ಕುಲಶೇಖರಪಟ್ಟಿನಂನಲ್ಲಿ ಸಿದ್ಧವಾಗುವ ಉಡ್ಡಯನ ಕೇಂದ್ರವು ಪೂರೈಸಲಿರುವುದಾಗಿ ಇಸ್ರೊ ಭಾವಿಸಿದೆ. ಸಣ್ಣ ಉಪಗ್ರಹ ಉಡಾವಣಾ ವಾಹನಗಳನ್ನು (ಎಸ್‌ಎಸ್‌ಎಲ್‌ವಿ) ಉಡಾವಣೆ ಮಾಡಲು ಮೀಸಲಾದ ಈ ಹೊಸ ತಾಣವು ಇಸ್ರೊಗೆ ಇಂಧನ ಉಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಕುಲಶೇಖರಪಟ್ಟಿಣಂನ ಉಡ್ಡಯನ ಕೇಂದ್ರದಿಂದ ಉಡಾವಣೆಯಾಗುವ ಉಪಗ್ರಹಗಳು ಶ್ರೀಹರಿಕೋಟಾದಿಂದ ಉಡಾವಣೆ ಮಾಡುವುದಕ್ಕಿಂತ ಭಿನ್ನವಾಗಿ, ನೇರವಾಗಿ ದಕ್ಷಿಣದ ಕಡೆಗೆ ಚಲಿಸಬಹುದು. ದಕ್ಷಿಣ ಧ್ರುವದ ಕಡೆಗೆ ಶ್ರೀಲಂಕಾದ ಮೇಲೆ ಹಾರುವುದನ್ನು ತಪ್ಪಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
'ಸಣ್ಣ ಉಪಗ್ರಹಗಳು ಮತ್ತು ರಾಕೆಟ್‌ಗಳನ್ನು ನಿರ್ಮಿಸುವ ಉದಯೋನ್ಮುಖರಿಗೆ ನಾವು ಬೆಂಬಲ ನೀಡುವ ಅಗತ್ಯವಿದೆ. ಹೊಸ ಉಡ್ಡಯನ ಕೇಂದ್ರವು ಇಸ್ರೊಗೆ ಹೆಚ್ಚಿನ ಪೇಲೋಡ್ ಸಾಮರ್ಥ್ಯ ನೀಡಲಿದೆ. ಉಡಾವಣೆಗಳಿಗೆ ಕಡಿಮೆ ಸಮಯ ಹಿಡಿಯಲಿದೆ' ಎಂದು ಅವರು ಹೇಳಿದರು.
ಪರ್ಯಾಯ ಉಡ್ಡಯನ ಕೇಂದ್ರ ನಿರ್ಮಾಣದ ₹950 ಕೋಟಿಯ ಈ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ತಮಿಳುನಾಡು ಸರ್ಕಾರ ಬಹುತೇಕ ಪೂರ್ಣಗೊಳಿಸಿದೆ. ತೂತುಕುಡಿ ಜಿಲ್ಲೆಯ ಕುಲಶೇಖರಪಟ್ಟಿಣಂ ಮತ್ತು ಸಾತಾಂಕುಳಂ ತಾಲ್ಲೂಕಿನ ಪಡುಕ್ಕಪತ್ತು, ಪಲ್ಲಕುರಿಚಿ ಮತ್ತು ಮಾಥವನ್‌ಕುರಿಚಿ ಗ್ರಾಮಗಳಲ್ಲಿ ಇಸ್ರೊಗೆ ಅಗತ್ಯವಿರುವ 2,300 ಎಕರೆ ಭೂಮಿಯಲ್ಲಿ 2,200 ಎಕರೆಗೂ ಹೆಚ್ಚು ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ.
ಸಣ್ಣ ಉಪಗ್ರಹ ಮಾರುಕಟ್ಟೆಯು ಜಗತ್ತಿನಾದ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುವ ನಿರೀಕ್ಷೆಯೊಂದಿಗೆ, ಬಾಹ್ಯಾಕಾಶ-ಸಂಬಂಧಿತ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆಯಂಡ್‌ಡಿ) ಚಟುವಟಿಕೆಗಾಗಿ ಬಾಹ್ಯಾಕಾಶ ಕೈಗಾರಿಕಾ ಪಾರ್ಕ್ ಮತ್ತು ಪ್ರೊಪೆಲ್ಲಂಟ್ಸ್ ಪಾರ್ಕ್ ಅನ್ನು ಪ್ರಾರಂಭಿಸಲು ರಾಜ್ಯ ಸರ್ಕಾರವು ಚಿಂತನೆ ನಡೆಸುತ್ತಿದೆ.