ನವದೆಹಲಿ: ಭಾರತದ ಮುಂಚೂಣಿ ಐಟಿ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್ (TCS) ಗುರುವಾರ ಡಿಸೆಂಬರ್ 2023 ಕ್ಕೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ (2023ರ ಅಕ್ಟೋಬರ್ನಿಂದ ಡಿಸೆಂಬರ್ವರೆಗೆ) ತನ್ನ ಆರ್ಥಿಕ ಫಲಿತಾಂಶಗಳನ್ನು ಪ್ರಕಟಿಸಿದೆ.
ಭಾರತದ ಪ್ರಮುಖ ಸಾಫ್ಟ್‌ವೇರ್ ಸೇವಾ ಪೂರೈಕೆ ಕಂಪನಿಯಾದ ಟಿಸಿಎಸ್ ವರ್ಷದಿಂದ ವರ್ಷಕ್ಕೆ ಶೇಕಡಾ 2% ರಷ್ಟು ಏಕೀಕೃತ ನಿವ್ವಳ ಲಾಭದ ಬೆಳವಣಿಗೆಯನ್ನು ವರದಿ ಮಾಡಿದೆ, ಈ ತ್ರೈಮಾಸಿಕ ಲಾಭವು 11,058 ಕೋಟಿ ರೂಪಾಯಿಗೆ ತಲುಪಿದೆ.
ಕಂಪನಿಯ ಆದಾಯವು ವಿಶ್ಲೇಷಕರು ನಿರೀಕ್ಷಿಸಿದ್ದಕ್ಕಿಂತ ಸ್ವಲ್ಪ ಉತ್ತಮವಾಗಿ ಬಂದಿದೆ.
ಟಿಸಿಎಸ್ ಕಂಪನಿಯ ಮಂಡಳಿಯು ಈ ಮೂರನೇ ತ್ರೈಮಾಸಿಕ ಫಲಿತಾಂಶಗಳ ಹಿನ್ನೆಲೆಯಲ್ಲಿ ಪ್ರತಿ ಷೇರಿಗೆ ರೂ 18 ರ ವಿಶೇಷ ಲಾಭಾಂಶ ಹಾಗೂ ಪ್ರತಿ ಷೇರಿಗೆ ರೂ 9 ರ ಮಧ್ಯಂತರ ಲಾಭಾಂಶ ವಿಂಗಡಿಸಲು ಶಿಫಾರಸು ಮಾಡಿದೆ.
' ಬೋರ್ಡ್ ಮೀಟಿಂಗ್‌ನಲ್ಲಿ, ನಿರ್ದೇಶಕರು ಮೂರನೇ ಮಧ್ಯಂತರ ಲಾಭಂಶ ರೂ. 9 ಮತ್ತು ಕಂಪನಿಯ ಪ್ರತಿ ಇಕ್ವಿಟಿ ಷೇರಿಗೆ 18 ರೂ.ಗಳ ವಿಶೇಷ ಲಾಭಾಂಶವನ್ನು ಘೋಷಿಸಿದ್ದಾರೆ ಎಂದು ನಾವು ನಿಮಗೆ ತಿಳಿಸಲು ಬಯಸುತ್ತೇವೆ' ಎಂದು ಕಂಪನಿ ಹೇಳಿದೆ.
ಈ ಹಿಂದಿನ ವರ್ಷದ ತ್ರೈಮಾಸಿಕಕ್ಕೆ ಹೋಲಿಸಿದರೆ, ಕಂಪನಿಯ ಆದಾಯವು ಶೇಕಡಾ 1.5 ರಷ್ಟು ಏರಿದೆ, ಆದರೆ ಅದರ ನಿವ್ವಳ ಲಾಭವು ಶೇಕಡಾ 2.5 ರಷ್ಟು ಕಡಿಮೆಯಾಗಿದೆ. ಏಕೆಂದರೆ ಟಿಸಿಎಸ್ ಮೂರನೇ ತ್ರೈಮಾಸಿಕದಲ್ಲಿ ಕಾನೂನು ಕ್ಲೈಮ್‌ನ ಇತ್ಯರ್ಥಕ್ಕಾಗಿ 958 ಕೋಟಿ ರೂ.ಗಳ ಒಂದು-ಬಾರಿ ಶುಲ್ಕವನ್ನು ನೀಡಿದೆ.
ಟಿಸಿಎಸ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಕೆ ಕೃತಿವಾಸನ್ ಅವರು, 'ಸ್ಥೂಲ-ಆರ್ಥಿಕ ಅಡಚಣೆ ಇರುವ ದುರ್ಬಲ ತ್ರೈಮಾಸಿಕದಲ್ಲಿ ನಮ್ಮ ಬಲವಾದ ಕಾರ್ಯಕ್ಷಮತೆಯು ಉತ್ತಮ-ವೈವಿಧ್ಯತೆಯ ಬಂಡವಾಳ ಮತ್ತು ಗ್ರಾಹಕ ಕೇಂದ್ರಿತ ಕಾರ್ಯತಂತ್ರದೊಂದಿಗೆ ನಮ್ಮ ವ್ಯವಹಾರ ಮಾದರಿಯ ಶಕ್ತಿಯನ್ನು ಪ್ರದರ್ಶಿಸುತ್ತದೆ. ನಾವು ಜನರೇಟಿವ್ ಎಐನಲ್ಲಿ ಅಪಾರ ಆಸಕ್ತಿಯನ್ನು ಕಾಣುತ್ತಿದ್ದೇವೆ. ಈ ಕ್ಷೇತ್ರದಲ್ಲಿ ನಮ್ಮ ಗ್ರಾಹಕರಿಗೆ ನಾವೀನ್ಯತೆ ಮತ್ತು ಪರಿಶೋಧನಾ ಪ್ರಯತ್ನಗಳನ್ನು ಒದಗಿಸುತ್ತಿದ್ದೇವೆ' ಎಂದು ಹೇಳಿದ್ದಾರೆ.
ಗುರುವಾರ ಮಾರುಕಟ್ಟೆಯ ಮುಕ್ತಾಯದ ವೇಳೆಗೆ ಟಿಸಿಎಸ್ ಷೇರುಗಳು ಶೇಕಡಾ 0.37 ರಷ್ಟು ಏರಿಕೆ ಕಂಡು 3726.70 ರೂಪಾಯಿಗೆ ತಲುಪಿವೆ.