ಪಟ್ಟಣಂತಿಟ್ಟ: ಇತ್ತೀಚಿನ ದಿನಗಳಲ್ಲಿ ಸಾಲದ ಆಯಪ್ಗಳು ಮತ್ತು ರಮ್ಮಿಯಂತಹ ಆನ್ಲೈನ್ ಜೂಜಾಟಗಳು ಬಡ ಮತ್ತು ಮಧ್ಯಮ ಕುಟುಂಬಗಳ ಕತ್ತು ಹಿಸುಕುತ್ತಿವೆ. ಆನ್ಲೈನ್ನಲ್ಲಿ ನಡೆಯುವ ಈ ವಂಚನೆಯ ಚಕ್ರವ್ಯೂಹಕ್ಕೆ ಸಿಲುಕಿ ಸಾಕಷ್ಟು ಮಂದಿ ಮನೆ, ಜಮೀನು ಮಾರಿಕೊಂಡು ಬೀದಿಗೆ ಬಿದ್ದಿದ್ದಾರೆ.
ಕೆಲವರು ಕಿರುಕುಳ ತಾಳಲಾರದೆ ಸಾವಿನ ಮನೆ ಕದ ತಟ್ಟಿದರೆ, ಇನ್ನೂ ಕೆಲವರು ಹಣ ಕಳೆದುಕೊಂಡ ಹತಾಶೆಯಲ್ಲಿ ಕಳ್ಳತನದ ಹಾದಿಯನ್ನು ಹುಡುಕಿಕೊಳ್ಳುತ್ತಾರೆ. ಇದೀಗ ಅಂಥದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆನ್ಲೈನ್ ರಮ್ಮಿ ಜೂಜಾಟದಲ್ಲಿ 3 ಲಕ್ಷ ರೂ. ಹಣ ಕಳೆದುಕೊಂಡ ಯುವಕನೊಬ್ಬ, ಕೆಟ್ಟರೂ ಬುದ್ಧಿ ಕಲಿಯದೇ ರಮ್ಮಿ ಗೀಳಿಗೆ ಬಿದ್ದು, ಕಳ್ಳತನಕ್ಕೆ ಇಳಿದು ಕೊನೆಗೆ ಪೊಲೀಸರ ಅತಿಥಿಯಾಗಿದ್ದಾನೆ.
ಬಂಧಿತ ಖದೀಮನನ್ನು ಅಮಲ್ ಅಗಸ್ಟಿನ್ ಎಂದು ಗುರುತಿಸಲಾಗಿದೆ. ಈತ ಕೇರಳದ ಕೊಟ್ಟಾಯಂ ಜಿಲ್ಲೆಯ ಪಲಾದ ಭರಂಗನಮ್ ನಿವಾಸಿ. ರಮ್ಮಿ ಆಡಿ 3 ಲಕ್ಷ ರೂ. ಕಳೆದುಕೊಂಡಿದ್ದ ಅಮಲ್, ಕಳೆದುಕೊಂಡ ಹಣವನ್ನು ಮರು ಹೊಂದಿಸಲು ಕಳ್ಳತನಕ್ಕೆ ಇಳಿದಿದ್ದ.
ಇತ್ತೀಚೆಗೆ ನೆಡಿಯಕಲಾದಲ್ಲಿ 80 ವರ್ಷದ ವೃದ್ಧೆಯ ಕುತ್ತಿಗೆ ಮೇಲೆ ಚಾಕು ಇಟ್ಟು ಚಿನ್ನಾಭರಣವನ್ನು ಕದ್ದಿದ್ದ. ಇದೇ ಪ್ರಕರಣದಲ್ಲಿ ಪಟ್ಟಣಂತಿಟ್ಟದ ಎಲವಂತಿಟ್ಟ ಠಾಣಾ ಪೊಲೀಸರು ಆರೋಪಿ ಅಮಲ್ನನ್ನು ಬಂಧಿಸಿದ್ದರು. ವಿಚಾರಣೆ ನಡೆಸಿದ ಬಳಿಕ ಆತನ ಮುಖವಾಡ ಕಳಚಿತು. ಆನ್ಲೈನ್ ರಮ್ಮಿ ಜೂಜಾಟದ ಗೀಳು ಅಂಟಿಸಿಕೊಂಡಿದ್ದ ಅಮಲ್, ಕೆಟ್ಟ ದಾರಿ ಹಿಡಿದಿರುವುದು ಬೆಳಕಿಗೆ ಬಂದಿದೆ.
ರಮ್ಮಿ ಉಂಟುಮಾಡುತ್ತಿರುವ ಅವಾಂತರ ಒಂದೆರೆಡಲ್ಲ. ಸಾಕಷ್ಟು ಮಂದಿ ಇದರ ಜಾಲಕ್ಕೆ ಸಿಲುಕಿ ಮನೆ-ಮಠ ಮಾರಿಕೊಂಡಿದ್ದಾರೆ. ಅಲ್ಲದೆ, ಕೆಲವರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಯುವಕನೊಬ್ಬ ರಮ್ಮಿ ಆಟದಲ್ಲಿ ಹಣ ಕಳೆದುಕೊಂಡು ಅದೇ ನೋವಿನಲ್ಲಿ ಸಾವಿಗೆ ಶರಣಾಗಿದ್ದ. ಮೃತ ಯುವಕನನ್ನು ಪಿ.ಕೆ. ರೋಶ್ (23) ಎಂದು ಗುರುತಿಸಲಾಗಿದೆ.
ರೋಶ್ ಪಲ್ಲಿವಾಸಲ್ ಅಟ್ಟುಕಾಡುವಿನ ವಾಟರ್ಫಾಲ್ಸ್ ಬಳಿಯ ರೆಸಾರ್ಟ್ ಒಂದರಲ್ಲಿ ಉದ್ಯೋಗಿಯಾಗಿದ್ದ. ತಾನು ಕೆಲಸ ಮಾಡುತ್ತಿದ್ದ ರೆಸಾರ್ಟ್ನ ಕೋಣೆಯೊಂದರಲ್ಲಿ ನೇಣು ಬಿಗಿದು ಸಾವಿಗೆ ಶರಣಾದನು. ಇದೇ ರೀತಿ ಅನೇಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಆನ್ಲೈನ್ ರಮ್ಮಿ ಜೂಜಾಟದ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಜನರಲ್ಲೂ ರಮ್ಮಿ ಆಟದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ.