ಆಗ್ರಾ: ಕಳ್ಳರು ₹ 30 ಲಕ್ಷ ಹಣವಿದ್ದ ಎಟಿಎಂ ಯಂತ್ರವನ್ನೇ ಕದ್ದೊಯ್ದಿರುವ ಘಟನೆ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿ ನಡೆದಿದೆ.
ಬ್ಯಾಂಕ್ ಮ್ಯಾನೇಜರ್ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ಖದೀಮರ ಪತ್ತೆಗೆ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಬೆಳಗಿನ ಜಾವ 2.45ರ ಸುಮಾರಿಗೆ ಕಗರೋಲ್ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದೆ. ಎಟಿಎಂನಲ್ಲಿ ಶಬ್ಧ ಕೇಳಿ ಜೋರಾಗಿ ಕೂಗುವ ಮೂಲಕ ಸ್ಥಳೀಯರನ್ನು ಎಚ್ಚರಿಸಿದೆ ಎಂದು ಎಸ್‌ಬಿಐ ಬ್ಯಾಂಕ್ ಶಾಖೆ ಇರುವ ಕಟ್ಟಡದ ಮಾಲೀಕರು ಹೇಳಿದ್ದಾರೆ.
ಆದರೆ, ಜನ ಸೇರುವ ಹೊತ್ತಿಗೆ ಕಳ್ಳರು ಎಟಿಎಂ ಮೆಷಿನನ್ನು ವ್ಯಾನ್‌ನಲ್ಲಿ ಹಾಕಿಕೊಂಡು ಹೋದರು ಎಂದೂ ಅವರು ಹೇಳಿದ್ದಾರೆ.
ಕದ್ದೊಯ್ದಿರುವ ಎಟಿಎಂನಲ್ಲಿ ₹30 ಲಕ್ಷ ಹಣವಿತ್ತು ಎಂದು ಬ್ಯಾಂಕ್ ಮ್ಯಾನೇಜರ್ ಹೇಳಿದ್ಧಾರೆ.
ಖಾಸಗಿ ವಾಹನದ ಜೊತೆ ಕಗರೋಲ್ ಎಸ್‌ಬಿಐ ಶಾಖೆಗೆ ನುಗ್ಗಿರುವ ಅಪರಿಚಿತ ವ್ಯಕ್ತಿಗಳು ಎಟಿಎಂ ಕದ್ದೊಯ್ದಿದ್ದಾರೆ. ಸಿಸಿಟಿವಿ ದೃಶ್ಯ ಪರಿಶೀಲಿಸಲಾಗುತ್ತಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಐದು ತಂಡಗಳನ್ನು ರಚಿಸಲಾಗಿದೆ ಎಂದು ಆಗ್ರಾ ಪೊಲೀಸ್ ಕಮೀಷನರ್ ಪ್ರೀತಿಂದರ್ ಸಿಂಗ್ ಹೇಳಿದ್ದಾರೆ.