ಅಯೋಧ್ಯೆ: ಇದೇ 22 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿರುವ ಮತ್ತು ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಮಾಡಲಿರುವ ರಾಮಮಂದಿರ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ....
ರಾಮಮಂದಿರ ದೇವಾಲಯವನ್ನು ನಾಗರ ಶೈಲಿಯಲ್ಲಿ ನಿರ್ಮಿಸಲಾಗಿದೆ (ಮಾಲ್ವಾ, ರಜಪೂತ ಮತ್ತು ಕಳಿಂಗ ಪ್ರದೇಶಗಳಲ್ಲಿ ಇದು ಹೆಚ್ಚು ಜನಪ್ರಿಯವಾಗಿದೆ)
ದೇವಾಲಯದ ಆಯ: ಉದ್ದ (ಪೂರ್ವದಿಂದ ಪಶ್ಚಿಮಕ್ಕೆ) - 380 ಅಡಿ, ಅಗಲ - 250 ಅಡಿ, ಮತ್ತು ಎತ್ತರ - 161 ಅಡಿ ಇದೆ.
ದೇವಾಲಯ ಮೂರು ಅಂತಸ್ತಿನದಾಗಿದ್ದು, ಪ್ರತಿ ಮಹಡಿ 20 ಅಡಿ ಎತ್ತರವಿದೆ. ದೇವಾಲಯದಲ್ಲಿ ಒಟ್ಟು 392 ಕಂಬಗಳು, 44 ದ್ವಾರಗಳಿವೆ.
ಮುಖ್ಯ ಗರ್ಭಗುಡಿ ಬಾಲರಾಮನ ಗೃಹವಾಗಿರಲಿದ್ದು ದೇವಾಲಯದ ಮೊದಲ ಮಹಡಿ ಶ್ರೀರಾಮ ದರ್ಬಾರ್ ಆಗಿರಲಿದೆ.
ಐದು ಮಂಟಪಗಳನ್ನು ಒಳಗೊಂಡ ರಾಮಮಂದಿರದಲ್ಲಿ ನೃತ್ಯ, ರಂಗ, ಸಭಾ, ಪ್ರಾರ್ಥನೆ ಮತ್ತು ಕೀರ್ತನ ಮಂಟಪಗಳಿವೆ.
ದೇವಸ್ಥಾನದ ಪ್ರವೇಶ ದ್ವಾರ ಪೂರ್ವ ದಿಕ್ಕಿನಲ್ಲಿದ್ದು, ಸಿಂಹದ್ವಾರದಿಂದ 32 ಮೆಟ್ಟಿಲುಗಳನ್ನು ಏರಿ ದೇವಾಲಯವನ್ನು ತಲುಪಬೇಕು. ವಿಶೇಷ ಚೇತನರಿಗಾಗಿ ಇಳಿಜಾರು ಪ್ರದೇಶ ಮತ್ತು ಲಿಫ್ಟ್ ವ್ಯವಸ್ಥೆಯನ್ನೂ ಮಾಡಲಾಗಿದೆ.
ದೇವಾಲಯದ ಸುತ್ತಲಿನ ಆಯತಾಕಾರದ ಗೋಡೆಯು ಒಟ್ಟು 732 ಮೀಟರ್ ಉದ್ದ ಮತ್ತು 14 ಅಡಿ ಅಗಲವಿದೆ.
ಸೂರ್ಯದೇವ. ತಾಯಿ ಭಗವತಿ, ಗಣಪತಿ ಮತ್ತು ಶಿವನ ದೇವಾಲಯಗಳನ್ನು ರಾಮಮಂದಿರ ನಾಲ್ಕು ಮೂಲೆಗಳಲ್ಲಿ ನಿರ್ಮಿಸಲಾಗಿದೆ. ಅದೇ ರೀತಿ ಅನ್ನಪೂರ್ಣ ದೇವಿ ಮತ್ತು ಹನುಮಂತನ ಗುಡಿಯನ್ನು ಮಂದಿರದ ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿ ನಿರ್ಮಿಸಲಾಗಿದೆ.
ದೇವಾಲಯದ ಬಳಿ ಪುರಾಣ ಕಾಲದ ಸೀತಾಕೂಪ ಇರಲಿದೆ.
ದೇವಾಲಯದ ಆವರಣದಲ್ಲಿ ಮಹರ್ಷಿ ವಾಲ್ಮೀಕಿ, ಶಬರಿ ಮತ್ತು ಗೌತಮ ಮಹರ್ಷಿಯ ಪತ್ನಿ ಅಹಲ್ಯಾ ದೇವಿಯ ಗುಡಿ ಕಟ್ಟಲಾಗಿದೆ.
ನೈರುತ್ಯ ದಿಕ್ಕಿನಲ್ಲಿದ್ದ ಪುರಾತನ ಶಿವ ದೇವಾಲಯ 'ನವರತ್ನ ಕುಬೇರ ತಿಲ'ವನ್ನು ನವೀಕರಿಸಲಾಗಿದ್ದು, ಜಟಾಯು ಮೂರ್ತಿಯನ್ನು ಸ್ಥಾಪಿಸಲಾಗಿದೆ.
ದೇವಾಲಯದಲ್ಲಿ ಮಣ್ಣಿನ ತೇವಾಂಶ ತಪ್ಪಿಸಲು 21 ಅಡಿ ಗ್ರಾನೈಟ್ ಅಡಿಪಾಯ ನಿರ್ಮಿಸಲಾಗಿದೆ.
ಭಕ್ತಾದಿಗಳಿಗಾಗಿ 25 ಸಾವಿರ ಜನರ ಸಾಮರ್ಥ್ಯದ ಕಟ್ಟಡ ನಿರ್ಮಿಸಲಾಗಿದ್ದು, ಲಾಕರ್ಸ್, ವೈದ್ಯಕೀಯ ಸೌಲಭ್ಯ ಸೇರಿದಂತೆ ವಿವಿಧ ಸೌಕರ್ಯಗಳನ್ನು ಕಲ್ಪಿಸಲಾಗಿದೆ.
ಭಾರತೀಯ ಸಂಪ್ರದಾಯವನ್ನು ಅನುಸರಿಸಿ ಮತ್ತು ಸ್ಥಳೀಯ ತಂತ್ರಜ್ಞಾನವನ್ನು ಬಳಸಿಕೊಂಡು ಪರಿಸರ ಸಂರಕ್ಷಣೆಯ ಮೇಲೆ ಕೇಂದ್ರೀಕರಿಸಿ ಒಟ್ಟು 70 ಎಕರೆ ಪ್ರದೇಶದಲ್ಲಿ ಈ ದೇವಾಲಯ ನಿರ್ಮಿಸಲಾಗಿದೆ.
ರಾಮಮಂದಿರ ಕಟ್ಟಡದ ನಿರ್ಮಾಣ ವೆಚ್ಚ ₹1400 ಕೋಟಿ - ₹1800 ಕೋಟಿ ಆಗಿದ್ದು, ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸರಿಸುಮಾರು ₹60-70 ಲಕ್ಷದ ದೇಣಿಗೆಯನ್ನು ಪಡೆಯುತ್ತಿದೆ.