ಅಯೋಧ್ಯೆ: ರಾಷ್ಟ್ರ ರಾಜಧಾನಿ ದೆಹಲಿಯಿಂದ ಅಯೋಧ್ಯೆಗೆ ವಿಮಾನಯಾನ ಆರಂಭಿಸುವ ಮೂಲಕ ದೇಶೀಯ ಸಂಸ್ಥೆ ಝೂಮ್ ನಾಲ್ಕು ವರ್ಷಗಳ ನಂತರ ತನ್ನ ಕಾರ್ಯಾಚರಣೆಯನ್ನು ಮರು ಆರಂಭಿಸಿದೆ.
ಸದ್ಯ ಝೂಮ್ ಸಂಸ್ಥೆಯ ಬಳಿ CRJ 200ERರ ಐದು ವಿಮಾನಗಳಿವೆ. ಪ್ರತಿಯೊಂದು 50 ಆಸನಗಳ ಸಾಮರ್ಥ್ಯ ಹೊಂದಿದೆ.
'ಆರಂಭದಲ್ಲಿ ವಾರದಲ್ಲಿ ಮೂರು ದಿನ ಈ ಮಾರ್ಗದಲ್ಲಿ ವಿಮಾನ ಹಾರಾಟ ನಡೆಸಲು ಝೂಮ್ ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಇನ್ನೂ ಕೆಲ ನಗರಗಳಿಗೆ ವಿಮಾನಯಾನ ವಿಸ್ತರಿಸಲಾಗುವುದು' ಎಂದು ಸಂಸ್ಥೆಯ ನಿರ್ದೇಶಕ ಹಾಗೂ ಸಿಇಒ ಅತುಲ್ ಗಂಭೀರ್ ಬುಧವಾರ ಹೇಳಿದ್ದಾರೆ.
'ಸದ್ಯ ಎರಡು ವಿಮಾನಗಳು ಕಾರ್ಯಾಚರಣೆ ನಡೆಸಲಿವೆ. ಮುಂದಿನ ದಿನಗಳಲ್ಲಿ ಎಲ್ಲಾ ಐದು ವಿಮಾನಗಳ ಹಾರಾಟ ಆರಂಭವಾಗಲಿದೆ. ಚಿಕ್ಕ ವಿಮಾನಗಳನ್ನು ಹೊಂದಬೇಕೆ ಅಥವಾ ಬೋಯಿಂಗ್/ ಏರ್‌ಬಸ್ ಮಾದರಿಯ ವಿಮಾನಗಳ ಹಾರಾಟ ನಡೆಸಬೇಕೇ ಎಂಬ ಬಗ್ಗೆ ಚಿಂತನೆ ನಡೆದಿದೆ' ಎಂದಿದ್ದಾರೆ.
'ಮುಂದಿನ ಎರಡು ವರ್ಷಗಳಲ್ಲಿ 20 ವಿಮಾನಗಳನ್ನು ಹೊಂದುವ ಗುರಿಯನ್ನು ಝೂಮ್ ಹೊಂದಿದೆ. ಆ ಮೂಲಕ ಸಂಸ್ಥೆಯ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಯನ್ನಾಗಿಸುವ ಗುರಿ ನಮ್ಮದು. ಸದ್ಯ 125 ಸಿಬ್ಬಂದಿ ಇದ್ದಾರೆ. ಮುಂದಿನ ಒಂದು ತಿಂಗಳಲ್ಲಿ ಹೆಚ್ಚುವರಿ 75 ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲಾಗುವುದು' ಎಂದು ಗಂಭೀರ್ ಹೇಳಿದ್ದಾರೆ.
2023ರ ಸೆಪ್ಟೆಂಬರ್‌ನಲ್ಲಿ ವಾಯುಯಾನ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA)ವು ಝೆಕ್ಸಸ್ ಏರ್ ಸರ್ವೀಸ್ ಅವರ ಪರವಾನಗಿಯನ್ನು ನವೀಕರಿಸಿತು. ಈಗ ಇದು ಝೂಮ್ ಏರ್‌ಲೈನ್ಸ್ ಆಗಿ ಕಾರ್ಯಾಚರಣೆ ಆರಂಭಿಸಿದೆ. ಗುರುಗ್ರಾಮ ಮೂಲದ ಈ ವಿಮಾನಯಾನ ಸಂಸ್ಥೆಯು 2017ರಲ್ಲಿ ಸಿಆರ್‌ಜೆ ವಿಮಾನಗಳ ಮೂಲಕ ತನ್ನ ಕಾರ್ಯ ಆರಂಭಿಸಿತು. 2020ರಲ್ಲಿ ಅದು ಸ್ಥಗಿತಗೊಂಡಿತು.