ಹೈದರಾಬಾದ್: ಹೊಸ ವರ್ಷಾಚರಣೆಯ ಮುನ್ನ ದಿನವಾದ ಭಾನುವಾರದಂದು ಗ್ರಾಹಕರು ಆನ್‌ಲೈನ್ ಮೂಲಕ ಆಹಾರ, ದಿನಸಿ ಸಾಮಗ್ರಿ ಸೇರಿದಂತೆ ದಿನಬಳಕೆಯ ಅಗತ್ಯ ವಸ್ತುಗಳ ಖರೀದಿಯಲ್ಲಿ ದಾಖಲೆ ಬರೆದಿದ್ದಾರೆ.
'ಹೊಸ ವರ್ಷದ ಮುನ್ನ ದಿನದಂದು 4.8 ಲಕ್ಷ ಬಿರಿಯಾನಿ ಮಾರಾಟವಾಗಿವೆ.
ಪ್ರತಿ ನಾಲ್ಕು ಬಿರಿಯಾನಿ ಆರ್ಡರ್‌ಗಳ ಪೈಕಿ ಒಂದು ಬಿರಿಯಾನಿಯು ಹೈದರಾಬಾದ್‌ನಿಂದ ಆರ್ಡರ್ ಆಗಿದೆ. 2023ರ ನವೆಂಬರ್ 19ರಂದು ನಡೆದ ವಿಶ್ವಕಪ್ ಕ್ರಿಕೆಟ್‌ನ ಫೈನಲ್ ಪಂದ್ಯದ ವೇಳೆ ದಾಖಲೆ ಪ್ರಮಾಣದಲ್ಲಿ ಗ್ರಾಹಕರು ಬಿರಿಯಾನಿ ಆರ್ಡರ್ ಮಾಡಿದ್ದರು ಎಂದು ತಿಳಿಸಿದೆ.
ಸ್ವಿಗ್ಗಿಯು ಕಳೆದ ವರ್ಷ ಇದೇ ಅವಧಿಯಲ್ಲಿ 3.50 ಲಕ್ಷ ಬಿರಿಯಾನಿ ಮತ್ತು 2.5 ಲಕ್ಷಕ್ಕೂ ಹೆಚ್ಚು ಪಿಜ್ಜಾಗಳನ್ನು ಗ್ರಾಹಕರಿಗೆ ತಲುಪಿಸಿತ್ತು ಎಂದು ಕಂಪನಿಯ ಸಿಇಒ (ಆಹಾರ ಮಾರುಕಟ್ಟೆ) ರೋಹಿತ್ ಕಪೂರ್ ತಿಳಿಸಿದ್ದಾರೆ.
'ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಹೊಸ ವರ್ಷದ ಮುನ್ನ ದಿನದಂದು ಗ್ರಾಹಕರು ಅತಿಹೆಚ್ಚು ದಿನಸಿ ಪದಾರ್ಥಗಳನ್ನು ಆರ್ಡರ್ ಮಾಡಿದ್ದಾರೆ' ಎಂದು ಇನ್‌ಸ್ಟಾಮಾರ್ಟ್ ತಿಳಿಸಿದೆ.
ಜೊಮಾಟೊ ದಾಖಲೆ: '2,015ರಿಂದ 2020ರ ವರೆಗೆ ಹೊಸ ವರ್ಷದ ಮುನ್ನ ದಿನದಂದು ಅತಿಹೆಚ್ಚಿನ ಪ್ರಮಾಣದಲ್ಲಿ ಆಹಾರ ಪೂರೈಕೆಗೆ ಜೊಮಾಟೊ ಕಂಪನಿಯು ಆರ್ಡರ್ ಸ್ವೀಕರಿಸಿತ್ತು. ಈ ಹೊಸ ವರ್ಷದಲ್ಲೂ ಅಷ್ಟೇ ಸಂಖ್ಯೆಯ ಆರ್ಡರ್ ಸ್ವೀಕರಿಸಿ ಗ್ರಾಹಕರಿಗೆ ಸೇವೆ ಒದಗಿಸಿದೆ' ಎಂದು ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ಹೇಳಿದ್ದಾರೆ.
ಜೊಮಾಟೊ ಒಡೆತನದ ಗ್ರಾಹಕ ಆನ್‌ಲೈನ್ ಡೆಲಿವರಿ ತಾಣ ಬ್ಲಿಕಿಂಟ್ ಕೂಡ 'ಒಂದು ನಿಮಿಷದಲ್ಲಿ ಅತಿಹೆಚ್ಚು ಆರ್ಡರ್ ದಾಖಲಾದ ದಿನ (ಭಾನುವಾರ) ಇದಾಗಿದೆ' ಎಂದು ಹೇಳಿದೆ. ಆದರೆ, ಎಷ್ಟು ಸಂಖ್ಯೆಯಲ್ಲಿ ಆರ್ಡರ್ ಸ್ವೀಕರಿಸಲಾಗಿದೆ ಎಂಬುದನ್ನು ತಿಳಿಸಿಲ್ಲ.