ವಾಜಿಮಾ: ಜಪಾನ್‌ನಲ್ಲಿ ಸೋಮವಾರ ಸಂಭವಿಸಿದ್ದ 7.5 ತೀವ್ರತೆಯ ಭೂಕಂಪದಿಂದ 48 ಮಂದಿ ಮೃತಪಟ್ಟಿದ್ದಾರೆ. ಭಾರಿ ಪ್ರಮಾಣದಲ್ಲಿ ಆಸ್ತಿ ನಷ್ಟವಾಗಿದೆ. ಕುಸಿದ ಕಟ್ಟಡದ ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗೆ ಶೋಧ ನಡೆದಿದೆ.
ದ್ವೀಪ ಪ್ರದೇಶ ಹೊನ್ಶುವಿನ ಇಶಿಕಾವಾ ವಲಯದಲ್ಲಿ ಭೂಕಂಪದ ತೀವ್ರತೆಯು ಹೆಚ್ಚಾಗಿದೆ.
48 ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಆಡಳಿತ ಘೋಷಿಸಿದೆ. ಆದರೆ, ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗಾಗಿ ಶೋಧ ಕಾರ್ಯ ಚುರುಕಿನಿಂದ ಸಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ.
ನೊಟೊ ಪೆನಿನ್‌ಸುಲಾದಲ್ಲಿ ಬೆಂಕಿಯಿಂದ ಹಲವು ಕಟ್ಟಡಗಳಿಗೆ ಹಾನಿಯಾಗಿದೆ. ಸಮುದ್ರ ತೀರಭಾಗದಲ್ಲಿ ಮೀನುಗಾರಿಕೆ ಹಲವು ದೋಣಿಗಳು ಮುಳುಗಿವೆ, ಇಲ್ಲವೇ ಕೊಚ್ಚಿಕೊಂಡು ಹೋಗಿವೆ. ಹೆದ್ದಾರಿಗಳಲ್ಲಿ ವಿವಿಧೆಡೆ ಭೂಕುಸಿತವಾಗಿದೆ.
'ನಾವಿದ್ದ ಮನೆಯೇ ಬಿರುಕುಬಿಟ್ಟಿದೆ. ಕುಟುಂಬದ ಎಲ್ಲರೂ ಅಪಾಯವಿಲ್ಲದೆ ಪಾರಾಗಿದ್ದೇವೆ. ಇದು, ತುಂಬಾ ಹಿಂಸಾತ್ಮಕವಾದ ಭೂಕಂಪ' ಎಂದು ವಾಜಿಮಾದ ನಿವಾಸಿ ಅಕಿಕೊ ಪರಿಸ್ಥಿತಿಯನ್ನು ಸ್ಮರಿಸಿದರು.
ಶಿಖಾ ಪಟ್ಟಣದಲ್ಲಿ ನೀರಿಗೆ ಸಾಲುಗಟ್ಟಿದ್ದ 73 ವರ್ಷದ ಸುಗುಮಸ ಮಿಹಾರಾ, ಇದೊಂದು ಪರಿಣಾಮಕಾರಿಯಾದ ಪೆಟ್ಟು ಎಂದರು. 33 ಸಾವಿರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಹಲವೆಡೆ ನೀರಿನ ಪೂರೈಕೆಯೂ ವ್ಯತ್ಯಯವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಭೂಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ ದಾಖಲಾದಂತೆ 7.5ರಷ್ಟಿತ್ತು. ಆದರೆ, ಜಪಾನ್‌ನ ಹವಾಮಾನ ಇಲಾಖೆ ತೀವ್ರತೆ 7.6ರಷ್ಟಿತ್ತು. 150ಕ್ಕೂ ಹೆಚ್ಚು ಬಾರಿ ಭೂಕಂಪದ ಅನುಭವವಾಗಿದೆ ಎಂದು ತಿಳಿಸಿದೆ.
ಜಪಾನ್‌ನ ಅಗ್ನಿಶಾಮಕ ನಿರ್ವಹಣಾ ಏಜೆನ್ಸಿಯ ಅಧಿಕಾರಿಗಳ ಪ್ರಕಾರ, ಬಾಧಿತ ಪ್ರದೇಶಗಳಿಂದ ಸುಮಾರು 62 ಸಾವಿರ ಜನರಿಗೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ. ಸೇನಾ ನೆಲೆಯಲ್ಲಿ ಸುಮಾರು ಸಾವಿರ ಜನರು ಆಶ್ರಯ ಪಡೆದಿದ್ದಾರೆ.
ಜಪಾನ್ ವಾಜಿಮಾದಲ್ಲಿ ಬಹುಮಹಡಿ ಕಟ್ಟಡವೊಂದು ಕುಸಿದಿರುವುದು -ಎಎಫ್‌ಪಿ ಚಿತ್ರ'300 ಕಿ.ಮೀ ವ್ಯಾಪ್ತಿಯವರೆಗೂ ಕಟ್ಟಡಗಳು ಅಲುಗಾಡಿರುವುದು ಗೊತ್ತಾಗಿದೆ. ಬುಲೆಟ್ ರೈಲುಗಳ ಸಂಚಾರ ಹಠಾತ್ ನಿಲ್ಲಿಸಿದ್ದರಿಂದ 1,400 ಪ್ರಯಾಣಿಕರು ಅತಂತ್ರರಾಗಿದ್ದರು. ನೊಟೊ ವಿಮಾನನಿಲ್ದಾಣದಲ್ಲಿಯೂ 500 ಜನರು ಅತಂತ್ರರಾಗಿದ್ದರು ಎಂದು ವರದಿ ತಿಳಿಸಿದೆ.