ನವದೆಹಲಿ: ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಭಾರತದ ನೈಋತ್ಯ ಮಾನ್ಸೂನ್ ಮಳೆಯ ಮಾದರಿಯಲ್ಲಿ ಭಾರಿ ಬದಲಾವಣೆ ಕಂಡುಬರುತ್ತಿದೆ. ಕಳೆದ ಕೆಲ ದಶಕದಲ್ಲಿ ಮುಂಗಾರು ಮಳೆ ಮಾದರಿ ವೇಗವಾಗಿ ಮತ್ತು ಅನಿಯಮಿತವಾಗಿ ಬದಲಾಗುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ಕಳೆದ 10 ವರ್ಷಗಳಲ್ಲಿ ಭಾರತದ 4,419 ತಹಸಿಲ್ಗಳಲ್ಲಿ ನೈಋತ್ಯ ಮಾನ್ಸೂನ್ ಸಮಯದಲ್ಲಿ ಮಳೆಯ ಪ್ರಮಾಣ ಶೇ. 55 ಹೆಚ್ಚಾಗಿದೆ. ಶೇ. 11 ತಹಸಿಲ್ಗಳಲ್ಲಿ ಮಳೆ ಪ್ರಮಾಣ ಭಾರಿ ಇಳಿಕೆ ಕಂಡಿದೆ ಎಂದು 'ಡೀಕೋಡಿಂಗ್ ಇಂಡಿಯಾಸ್ ಚೇಂಜಿಂಗ್ ಮಾನ್ಸೂನ್ ಪ್ಯಾಟರ್ನ್ಸ್' ಶೀರ್ಷಿಕೆ ಅಡಿ ಚಿಂತಕರ ಛಾವಡಿಯೊಂದು ಸಿದ್ದಪಡಿಸಿದ ವರದಿ ಹೇಳಿದೆ.
ಸಂಶೋಧಕರು 1982 ರಿಂದ 2022 ರವರೆಗಿನ 4 ದಶಕಗಳ ಹವಾಮಾನ ದತ್ತಾಂಶವನ್ನು ಪರಿಶೀಲಿಸಿದ್ದಾರೆ. ಇದನ್ನು ಭಾರತೀಯ ಮಾನ್ಸೂನ್ ಡೇಟಾ ಅಸಿಮಿಲೇಷನ್ ಮತ್ತು ಅನಾಲಿಸಿಸ್ ಪ್ರಾಜೆಕ್ಟ್ನಿಂದ ಪಡೆಯಲಾಗಿತ್ತು. ಹವಾಮಾನ ವೈಪರೀತ್ಯ ವೇಗವಾಗುತ್ತಿದ್ದಂತೆ ಮಾನ್ಸೂನ್ ಮಳೆ ಮಾದರಿಗಳು ಕೂಡ ವೇಗವಾಗಿ ಮತ್ತು ಅನಿಯಮಿತವಾಗಿ ಬದಲಾವಣೆ ಕಂಡಿದೆ ಎಂದು ವಿಶ್ಲೇಷಕರು ಕಂಡುಕೊಂಡಿದ್ದಾರೆ.
ಹಠಾತ್ ಭಾರಿ ಮಳೆ, ಪ್ರವಾಹ: ಅಧಿಕ ಮಳೆ ಪ್ರದೇಶಗಳಲ್ಲಿ ಆಗಾಗ್ಗೆ ಭಾರಿ ಮಳೆಯಿಂದ ಅನಾಹುತಗಳು ಹೆಚ್ಚುತ್ತಿವೆ. ನೈಋತ್ಯ ಮಾನ್ಸೂನ್ ಮಳೆ ಭಾರತದ ಶೇ. 55 ತೆಹಸಿಲ್ಗಳಲ್ಲಿ ಹೆಚ್ಚಳ ಕಂಡಿದೆ. ಆದರೆ ಇದು ಹಠಾತ್ ಭಾರಿ ಮಳೆಯ ಪರಿಣಾಮವಾಗಿದೆ. ಆಗಾಗ್ಗೆ ಹಠಾತ್ ಪ್ರವಾಹ ಸಂಭವಿಸುವ ವಿದ್ಯಮಾನ ಹೆಚ್ಚುತ್ತಿದೆ. ಸುಮಾರು ಶೇ. 64 ತಹಸಿಲ್ಗಳು ಕಳೆದ 10 ವರ್ಷಗಳಲ್ಲಿ ವರ್ಷಕ್ಕೆ 15 ದಿನಗಳ ಭಾರಿ ಮಳೆಯ ಆವರ್ತನ ಕಂಡಿವೆ. ಆರ್ದ್ರ ಮಳೆ, ಹವಾಮಾನ ವೈಪರೀತ್ಯ ಕಾರಣಗಳಿಂದ ಒಟ್ಟು ಋತುಮಾನದ ಮಳೆಯ ಪ್ರಮಾಣವು ಹೆಚ್ಚುತ್ತಿದ್ದರೂ, ಮಳೆಯ ಹಂಚಿಕೆ ಅಸಮಾನವಾಗಿರುವ ಕಾರಣ ಜನರು ತೊಂದರೆ ಅನುಭವಿಸುವಂತಾಗಿದೆ. 2023ರಲ್ಲಿ ದೆಹಲಿ, ಉತ್ತರಾಖಂಡ,ಹಿಮಾಚಲ ಪ್ರದೇಶ, 2022ರಲ್ಲಿ ಬೆಂಗಳೂರಲ್ಲಿ ಭಾರಿ ಮಳೆ ಸುರಿದು ಅನಾಹುತ ಸಂಭವಿಸಿತ್ತು ಎಂದು ಅಧ್ಯಯನ ಹೇಳಿದೆ.
ಅಸಮಾನ ಹಂಚಿಕೆ: ಮಳೆಯು ಋತುವಿನ ಉದ್ದಕ್ಕೂ ಸಮವಾಗಿ ಹಂಚಿಕೆಯಾಗುತ್ತಿಲ್ಲ. ನೈಋತ್ಯ ಮಾನ್ಸೂನ್ ಮಳೆ ಕಡಿಮೆಯಾದ ಹೆಚ್ಚಿನ ತಹಸಿಲ್ಗಳು ಖಾರಿಫ್ ಬೆಳೆಗಳನ್ನು ಬಿತ್ತನೆ ಮಾಡಲು ನಿರ್ಣಾಯಕವಾದ ಜೂನ್ ಮತ್ತು ಜುಲೈ ತಿಂಗಳ ಆರಂಭಿಕ ಹಂತದಲ್ಲೇ ಮಳೆಯ ಕುಸಿತವನ್ನು ಕಂಡಿವೆ. ಮತ್ತೊಂದೆಡೆ, ಭಾರತದಲ್ಲಿನ ಶೇ. 48 ತಹಸಿಲ್ಗಳು ಅಕ್ಟೋಬರ್ ಮಳೆಯಲ್ಲಿ ಶೇ. 10ಕ್ಕಿಂತ ಹೆಚ್ಚು ಹೆಚ್ಚಳವನ್ನು ಕಂಡಿವೆ. ನೈಋತ್ಯ ಮಾನ್ಸೂನ್ ವಿಳಂಬವಾಗಿ ಹಿಂತೆಗೆತ ಇದಕ್ಕೆ ಕಾರಣ ಎನ್ನಲಾಗಿದೆ. ಇದು ರಾಬಿ ಬೆಳೆಗಳ ಬಿತ್ತನೆಯ ಮೇಲೆ ಪರಿಣಾಮ ಬೀರಬಹುದು ಎಂದು ಅಧ್ಯಯನ ಹೇಳಿದೆ.
ಒಣ ಪ್ರದೇಶದಲ್ಲಿ ಹೆಚ್ಚು ಮಳೆ!: ಕೆಲವು ಸಾಂಪ್ರದಾಯಿಕ ಒಣ ಪ್ರದೇಶಗಳಲ್ಲಿ ಮಳೆಯು ಹೆಚ್ಚಾಗುತ್ತದೆ. ಆದರೆ ವಾಡಿಕೆಯಂತೆ ಹೆಚ್ಚಿನ ಮಳೆ ಬೀಳುವ ಪ್ರದೇಶಗಳಲ್ಲಿ ಕೆಲ ವರ್ಷಗಳಿಂದ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ರಾಜಸ್ಥಾನ, ಗುಜರಾತ್, ಕೊಂಕಣ ಪ್ರದೇಶ, ಮಧ್ಯ ಮಹಾರಾಷ್ಟ್ರ ಮತ್ತು ತಮಿಳುನಾಡಿನ ಕೆಲವು ಭಾಗ ಸಾಂಪ್ರದಾಯಿಕವಾಗಿ ಒಣ ಪ್ರದೇಶವಾಗಿದೆ. ಆದರೆ ಇಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಳೆಯಲ್ಲಿ ಗಮನಾರ್ಹವಾಗಿ ಹೆಚ್ಚಳ ಕಂಡಿದೆ ಎಂದು ಅಧ್ಯಯನ ವರದಿ ತಿಳಿಸಿದೆ. ಈ ಪ್ರದೇಶಗಳು 1981-2011ರ ಅವಧಿಗೆ ಹೋಲಿಸಿದರೆ ನೈಋತ್ಯ ಮಾನ್ಸೂನ್ ಮಳೆಯಲ್ಲಿ ಶೇ. 30ಕ್ಕಿಂತ ಹೆಚ್ಚು ಜಿಗಿತ ಕಂಡಿದೆ. ಏತನ್ಮಧ್ಯೆ, ಸಾಂಪ್ರದಾಯಿಕವಾಗಿ ಹೆಚ್ಚಿನ ಮಾನ್ಸೂನ್ ಮಳೆಯ ಪ್ರದೇಶಗಳಾದ ಅಸ್ಸಾಂ ಮತ್ತು ಮೇಘಾಲಯದಲ್ಲಿ ಮಳೆಯ ಪ್ರಮಾಣವು ಕಡಿಮೆಯಾಗಿದೆ. ಅಸ್ಸಾಂನ ಪಚಿಮ್ ನಲ್ಬರಿ ಸರ್ಕಲ್, ಬೋಯಿಟಮರಿ ಸರ್ಕಲ್ ಮತ್ತು ಬರ್ನಗರ ಸರ್ಕಲ್ಗಳಂತಹ ತಹಸಿಲ್ಗಳು ದೀರ್ಘಾವಧಿಯ ಸರಾಸರಿಗಿಂತ ಶೇ. 30 ಕಡಿಮೆ ಮಳೆಯನ್ನು ಪಡೆದಿವೆ.
ದಕ್ಷಿಣ, ಉತ್ತರದಲ್ಲಿ ವ್ಯತ್ಯಾಸ: ಕಳೆದ 10 ವರ್ಷಗಳಲ್ಲಿ ತಮಿಳುನಾಡಿನಲ್ಲಿ ಸುಮಾರು ಶೇ. 80 ತಹಸಿಲ್ಗಳಲ್ಲಿ, ತೆಲಂಗಾಣ ದಲ್ಲಿ ಶೇ. 44 ಮತ್ತು ಆಂಧ್ರಪ್ರದೇಶದಲ್ಲಿ ಶೇ. 39ರಷ್ಟು ಪ್ರದೇಶದಲ್ಲಿ ಹಿಂಗಾರು ಮಳೆಯ ಪ್ರಮಾಣ ಶೇ. 10 ಇಳಿಕೆ ಕಂಡಿದೆ. ಒಡಿಶಾ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಇದೇ ಅವಧಿಯಲ್ಲಿ ಮಳೆ ಪ್ರಮಾಣ ಹೆಚ್ಚಳ ಕಂಡಿದೆ.
ಕೃಷಿ ಉತ್ಪಾದನೆ ಕುಂಠಿತ: ಮಾನ್ಸೂನ್ ಮಾದರಿಗಳಲ್ಲಿನ ಬದಲಾವಣೆ ಕೃಷಿ ಉತ್ಪಾದನೆ ಮತ್ತು ಪರಿಸರ ವ್ಯವಸ್ಥೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ. ಕಳೆದ ದಶಕದಲ್ಲಿ ನೈಋತ್ಯ ಮಾನ್ಸೂನ್ ಮಳೆಯ ಪ್ರಮಾಣವು ಶೇ. 11 ತಹಸಿಲ್ಗಳಲ್ಲಿ ಮಾತ್ರ ಕಡಿಮೆಯಾಗಿದೆ ಎಂದು ಅಂಕಿ-ಅಂಶ ಹೇಳಿದೆ. ಗಂಗಾ ಬಯಲು, ಈಶಾನ್ಯ ಭಾರತ ಮತ್ತು ಹಿಮಾಲಯ ತಪ್ಪಲು ಪ್ರದೇಶದಲ್ಲಿ ಮಳೆ ಕೊರತೆ ಎದುರಾಗಿದೆ. ಇದು ಭಾರತದ ಕೃಷಿ ಉತ್ಪಾದನೆಗೆ ನಿರ್ಣಾಯಕ ಪ್ರದೇಶವಾಗಿದೆ. ಇಲ್ಲಿ ಖಾರಿಫ್ ಋತುವಿನಲ್ಲಿ ಕೃಷಿ ಚಟುವಟಿಕೆಗಳು ನೈಋತ್ಯ ಮಾನ್ಸೂನ್ ಮಳೆಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಮಳೆಯ ಇಳಿಕೆಯು ಕೃಷಿ ಉತ್ಪಾದನೆಗೆ ತೀವ್ರ ಅಡ್ಡಿಯಾಗಬಹುದು. ಜತೆಗೆ ಈ ಪ್ರದೇಶಗಳು ದುರ್ಬಲವಾದ ಪರಿಸರ ವ್ಯವಸ್ಥೆಗಳನ್ನು ಒಳಗೊಂಡಿವೆ. ಪ್ರವಾಹ, ಅನಾವೃಷ್ಟಿಗಳಂತಹ ವಿಪರೀತ ಹವಾಮಾನ ಘಟನೆಗಳಿಗೆ ಇವು ಗುರಿಯಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಹೇಳಿದ್ದಾರೆ.