ಅಯೋಧ್ಯೆ: ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಮುನ್ನುಡಿಯಾಗಿ 'ಅಕ್ಷತೆ' ನೀಡುವ ಕಾರ್ಯಕ್ರಮಕ್ಕೆ ಹೊಸ ವರ್ಷದ ಮೊದಲ ದಿನವಾದ ಸೋಮವಾರ ಅಯೋಧ್ಯೆಯಲ್ಲಿ ಚಾಲನೆ ದೊರೆಯಿತು.
ಅಕ್ಕಿ ಕಾಳುಗಳಿಗೆ ಅರಿಸಿನ ಹಾಗೂ ತುಪ್ಪ ಮಿಶ್ರಣ ಮಾಡಿ ತಯಾರಿಸಿರುವ 'ಅಕ್ಷತೆ' ನೀಡುವ ಪ್ರಕ್ರಿಯೆ ದೇಶದಾದ್ಯಂತ ಜನವರಿ 15ರವರೆಗೆ ನಡೆಯಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.
'ಅಕ್ಷತೆ'ಯ ಜತೆಯಲ್ಲೇ ರಾಮಮಂದಿರದ ಚಿತ್ರ ಹಾಗೂ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಮಾಹಿತಿ ಒಳಗೊಂಡ ಕರಪತ್ರವನ್ನೂ ನೀಡಲಾಗುತ್ತದೆ.
'ದೇಶದಾದ್ಯಂತ ಸುಮಾರು 5 ಲಕ್ಷ ದೇವಾಲಯಗಳ ಸನಿಹದಲ್ಲಿರುವ ಜನರಿಗೆ ರಾಮಮಂದಿರದ ಚಿತ್ರ ಹಾಗೂ ಕರಪತ್ರ ನೀಡಲಾಗುತ್ತದೆ. ಜನವರಿ 15ರ ವೇಳೆಗೆ ಸುಮಾರು 5 ಕೋಟಿ ಮಂದಿಗೆ ಅಕ್ಷತೆ ತಲುಪಿಸುವ ಗುರಿ ಇಟ್ಟುಕೊಳ್ಳಲಾಗಿದೆ' ಎಂದು ಟ್ರಸ್ಟ್‌ನ ಅಧಿಕಾರಿಯೊಬ್ಬರು ತಿಳಿಸಿದರು.
'ಅಕ್ಷತೆ ನೀಡುವ ಸಮಯದಲ್ಲಿ ಜನರು ತಮ್ಮ ಸಮೀಪದ ದೇವಾಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು. ಆ ಮೂಲಕ, ಅಯೋಧ್ಯೆಯಲ್ಲಿ ಮನೆಮಾಡಿರುವ ಸಂಭ್ರಮದ ವಾತಾವರಣವನ್ನು ತಮ್ಮ ಊರುಗಳಲ್ಲೂ ಉಂಟುಮಾಡಬೇಕು' ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮನವಿ ಮಾಡಿದರು.
ವಿಎಚ್‌ಪಿ ಮತ್ತು ಆರ್‌ಎಸ್‌ಎಸ್ ಹಾಗೂ ಅವುಗಳ ಸಹ ಸಂಘಟನೆಗಳ ಜತೆ ಗುರುತಿಸಿಕೊಂಡವರು ಅಕ್ಷತೆ ನೀಡುವ ಕೆಲಸ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.
ಅಯೋಧ್ಯೆಯಲ್ಲಿ 'ಅಕ್ಷತೆ' ನೀಡುವ ಕಾರ್ಯಕ್ರಮಕ್ಕೆ ವಾಲ್ಮೀಕಿ ಕಾಲೊನಿಯಲ್ಲಿರುವ ದೇವಾಲಯದಲ್ಲಿ ಚಾಲನೆ ನೀಡಲಾಯಿತು. ಈ ವೇಳೆ ಭಕ್ತರು 'ಜೈ ಶ್ರೀರಾಮ್' ಘೋಷಣೆ ಮೊಳಗಿಸಿದರು.
'ಅಕ್ಷತೆ ನೀಡುವುದು ಮಕರ ಸಂಕ್ರಾತಿಯ ದಿನವಾದ ಜನವರಿ 15ರವರೆಗೂ ಮುಂದುವರಿಯಲಿದೆ. ಸ್ವಯಂಸೇವಕರು ಗ್ರಾಮಗಳು ಮತ್ತು ಪಟ್ಟಣ ಪ್ರದೇಶಗಳ ಮನೆಗಳಿಗೆ ತೆರಳಿ ಅಕ್ಷತೆ ನೀಡಲಿದ್ದಾರೆ' ಎಂದು ರಾಯ್ ತಿಳಿಸಿದರು.
ಜನವರಿ 22ರಂದು ನಡೆಯಲಿರುವ ರಾಮನ ಮೂರ್ತಿ ಪ್ರತಿಷ್ಠಾಪನಾ ಸಮಾರಂಭದಲ್ಲಿ 1 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶ ಹಾಗೂ ವಿದೇಶಗಳ 7000 ಅತಿಥಿಗಳು ಭಾಗವಹಿಸಲಿದ್ದಾರೆ.