ನವದೆಹಲಿ: 2024ರ ಲೋಕಸಭಾ ಚುನಾವಣೆಗೆ ಸಿದ್ಧತೆ ಭರದಿಂದ ಸಾಗಿವೆ. ಕಾಂಗ್ರೆಸ್ 539 ಲೋಕಸಭಾ ಕ್ಷೇತ್ರಗಳಿಗೆ ಸಂಯೋಜಕರ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷವು ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ನಿರ್ಧರಿಸುತ್ತದೆ. ಆದರೆ 500ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪಕ್ಷವು ತನ್ನ ವೀಕ್ಷಕರನ್ನು ಅಂತಿಮಗೊಳಿಸಿದೆ ಎಂದು ಹೇಳಿದ್ದರು.
ಅಲ್ಲದೇ ಇಂಡಿಯಾ ಕೂಟದ ನಾಯಕರೊಂದಿಗೆ ಮಾತುಕತೆ ನಡೆಸಿದ ನಂತರ ನಿಖರವಾದ ಸ್ಥಾನಗಳ ಸಂಖ್ಯೆ ತಿಳಿಯಲಿದೆ ಎಂದು ಅವರು ಹೇಳಿದ್ದರು.
'539 ಲೋಕಸಭಾ ಸ್ಥಾನಗಳ ಸಂಯೋಜಕರ ಪಟ್ಟಿಯೊಂದಿಗೆ, ಮುಂಬರುವ ಸಾರ್ವತ್ರಿಕ ಚುನಾವಣೆಗೆ ಸಂಸದೀಯ ಕ್ಷೇತ್ರವಾರು ಸಂಯೋಜಕರ ನೇಮಕದ ಪ್ರಸ್ತಾವನೆಗೆ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಅನುಮೋದನೆ ನೀಡಿದ್ದಾರೆ' ಎಂದು ಕಾಂಗ್ರೆಸ್ ಹೇಳಿಕೆಯಲ್ಲಿ ತಿಳಿಸಿದೆ.
ಪಂಜಾಬ್ ಮತ್ತು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದೊಂದಿಗೆ ಸೀಟು ಹಂಚಿಕೆ ವಿಚಾಋವಾಗಿ ಔಪಚಾರಿಕ ಮಾತುಕತೆಗಳು ಸೋಮವಾರ ಪ್ರಾರಂಭವಾಗಲಿವೆ. ಅಲ್ಲದೇ ಕೆಲವು ಪಕ್ಷಗಳೊಂದಿಗೆ ಮಾತುಕತೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮುಕುಲ್ ವಾಸ್ನಿಕ್ ಸಂಚಾಲಕರಾಗಿ, ಹಿರಿಯ ನಾಯಕರಾದ ಅಶೋಕ್ ಗೆಹಲೋತ್ ಮತ್ತು ಭೂಪೇಶ್ ಬಾಘೇಲ್ ಅವರನ್ನು ಒಳಗೊಂಡಿರುವ ಸೀಟು ಹಂಚಿಕೆ ಕುರಿತ ಕಾಂಗ್ರೆಸ್‌ನ ಐವರು ಸದಸ್ಯರ ಸಮಿತಿಯು ಈಗಾಗಲೇ ರಾಜ್ಯ ಕಾಂಗ್ರೆಸ್ ಮುಖ್ಯಸ್ಥರೊಂದಿಗೆ ಆಂತರಿಕ ಸಮಾಲೋಚನೆ ನಡೆಸಿದೆ. ಹಾಗೂ ಅದರ ವರದಿಗಳನ್ನು ಪಕ್ಷದ ಅಧ್ಯಕ್ಷ ಖರ್ಗೆ ಅವರಿಗೆ ಹಸ್ತಾಂತರಿಸಿದೆ.