ನವದೆಹಲಿ: ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಂಗಳವಾರ ಕೊರೋನಾದಿಂದ ಒಬ್ಬರು ಮೃತಪಟ್ಟಿದ್ದಾರೆ ಮತ್ತು ದೇಶಾದ್ಯಂತ 573 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,565ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಮಂಗಳವಾರ ವೀಕರಿಸಿದ INSACOG ಡೇಟಾ ಪ್ರಕಾರ, ದೇಶದಲ್ಲಿ ಇದುವರೆಗೆ ಒಟ್ಟು 263 ಕೋವಿಡ್-19 ಉಪತಳಿ JN.1 ಪ್ರಕರಣಗಳು ಪತ್ತೆಯಾಗಿವೆ. ಅವುಗಳಲ್ಲಿ ಅರ್ಧದಷ್ಟು ಕೇರಳದಲ್ಲಿ ದಾಖಲಾಗಿವೆ. ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ JN.1 ಪ್ರಕರಣಗಳು ವರದಿಯಾಗಿವೆ.
ಕೇರಳ (133), ಗೋವಾ (51), ಗುಜರಾತ್ (34), ದೆಹಲಿ (16), ಕರ್ನಾಟಕ (ಎಂಟು), ಮಹಾರಾಷ್ಟ್ರ (ಒಂಬತ್ತು), ರಾಜಸ್ಥಾನ (ಐದು), ತಮಿಳುನಾಡು (ನಾಲ್ಕು), ತೆಲಂಗಾಣ (ಎರಡು) ಮತ್ತು ಒಡಿಶಾ (ಒಂದು)ದಲ್ಲಿ ಕೊರೋನಾ ರೂಪಾಂತರಿ JN.1 ಪ್ರಕರಣಗಳು ಪತ್ತೆಯಾಗಿವೆ.
ಮಂಗಳವಾರ ಬೆಳಗ್ಗೆ 8 ಗಂಟೆಗೆ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಯಲ್ಲಿ ಕೋವಿಡ್ ನಿಂದ ಕರ್ನಾಟಕದಲ್ಲಿ ಒಬ್ಬರು ಮತ್ತು ಹರಿಯಾಣದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಡಿಸೆಂಬರ್ 5 ರವರೆಗೆ ದೈನಂದಿನ ಪ್ರಕರಣಗಳ ಸಂಖ್ಯೆ ಎರಡಂಕಿಗಳಿಗಿಂತ ಕಡಿಮೆ ಇತ್ತು. ಆದರೆ ಹೊಸ ರೂಪಾಂತರಿ ಮತ್ತು ಶೀತ ಹವಾಮಾನದ ನಂತರ ಪ್ರಕರಣಗಳು ಮತ್ತೆ ಹೆಚ್ಚಿವೆ. 2020 ರ ಆರಂಭದಲ್ಲಿ ಪ್ರಾರಂಭವಾದ ಸಾಂಕ್ರಾಮಿಕ ರೋಗದಿಂದ ನಾಲ್ಕು ವರ್ಷಗಳಲ್ಲಿ ದೇಶಾದ್ಯಂತ ಸುಮಾರು 5.3 ಲಕ್ಷಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಮತ್ತು ಸುಮಾರು 4.5 ಕೋಟಿಗೂ ಹೆಚ್ಚು ಜನ ಸೋಂಕಿಗೆ ಒಳಗಾಗಿದ್ದಾರೆ.