ಪಣಜಿ: ತನ್ನ ನಾಲ್ಕು ವರ್ಷದ ಪುತ್ರನನ್ನು ಕೊಲೆ ಮಾಡಿದ ಆರೋಪದಡಿ ಬಂಧಿತರಾಗಿರುವ ಸುಚನಾ ಸೇಠ್ ಅವರಿಂದ ದೂರವಾಗಿರುವ ಪತಿ ವೆಂಕಟರಮಣ್ ಅವರಿಗೆ, 'ಕಳೆದ ಐದು ಭಾನುವಾರಗಳಿಂದ ಪುತ್ರನನ್ನು ನೋಡಲು ಸುಚನಾ ಅವಕಾಶ ನೀಡಿರಲಿಲ್ಲ' ಎನ್ನುವ ಸಂಗತಿಯನ್ನು ಗೋವಾ ಪೊಲೀಸರು ಶನಿವಾರ ತಿಳಿಸಿದ್ದಾರೆ.

'ವೆಂಕಟರಮಣ್ ಅವರು ಬೆಂಗಳೂರಿನಿಂದ ಮಧ್ಯಾಹ್ನ ಗೋವಾದ ಕಲಂಗೂಟ್ ಠಾಣೆಗೆ ಬಂದು ಪೊಲೀಸರ ಎದುರು ಈ ಪ್ರಕರಣದ ತನಿಖೆಯ ಭಾಗವಾಗಿ ವಿವರವಾದ ಹೇಳಿಕೆ ನೀಡಿದರು' ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತನಿಖಾಧಿಕಾರಿಯ (ಐಒ) ಭೇಟಿಗೆ ಹೋಗುವ ಮುನ್ನ ವೆಂಕಟರಮಣ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಲು ನಿರಾಕರಿಸಿದರು.
'ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ನನ್ನ ಮತ್ತು ಸುಚನಾ ನಡುವಿನ ವಿವಾಹ ವಿಚ್ಛೇದನ ಪ್ರಕ್ರಿಯೆಗಳು ನಡೆಯುತ್ತಿವೆ. ನ್ಯಾಯಾಲಯವು ಮಗುವನ್ನು ವಾರಕ್ಕೊಮ್ಮೆ ಭೇಟಿಯಾಗುವ ಅವಕಾಶವನ್ನು ನನಗೆ ನೀಡಿತ್ತು. ಆದರೆ, ಕಳೆದ ಐದು ಭಾನುವಾರಗಳಿಂದ ಮಗನ ಭೇಟಿಗೆ ಸುಚನಾ ಅವಕಾಶ ನೀಡಿರಲಿಲ್ಲವೆಂದು ವೆಂಕಟರಮಣ್ ಹೇಳಿಕೆ ನೀಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಮಗು ಕೊಲೆಯಾದಾಗ ವೆಂಕಟರಮಣ್ ಅವರು ಇಂಡೊನೇಷ್ಯಾದ ಜಕಾರ್ತದಲ್ಲಿದ್ದರು.
ಕೃತಕ ಬುದ್ಧಿಮತ್ತೆಯ ನವೋದ್ಯಮ 'ಮೈಂಡ್‌ಫುಲ್ ಎ.ಐ ಲ್ಯಾಬ್'ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಸುಚನಾ ಸೇಠ್ ಮತ್ತು ವೆಂಕಟರಮಣ್ ಅವರ ದಾಂಪತ್ಯ ಮುರಿದುಬಿದ್ದರಿದ್ದರಿಂದ ಇಬ್ಬರೂ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಇವರ ನಾಲ್ಕು ವರ್ಷದ ಮಗು, ಸುಚನಾ ಅವರ ಸುಪರ್ದಿಯಲ್ಲಿತ್ತು.
ಪೊಲೀಸರ ಪ್ರಕಾರ, ಸುಚನಾ ತನ್ನ ಮಣಿಕಟ್ಟು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸುವ ಮೊದಲು ಪುತ್ರನನ್ನು ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.