ಕಾಸರಗೋಡು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಲಬಾರ್ ಅಭಿವೃದ್ಧಿ ಯೋಜನೆಯ ಉದ್ಘಾಟನೆ ಜ. 5ರಂದು ಕಾಸರಗೋಡಿನಲ್ಲಿ ಜರುಗಲಿದೆ. ಬೆಳಗ್ಗೆ 10.30ಕ್ಕೆ ಕಾಸರಗೋಡು ತಾಳಿಪಡ್ಪು ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಕೇಂದ್ರ ಭೂಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಯೋಜನೆಯನ್ನು ವಿದ್ಯುಕ್ತವಾಗಿ ಘೋಷಿಸುವರು. ಸಮಾರಂಬದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಸಚಿವರಾದ ಆರ್.ಪಿ ಸಿಂಗ್, ವಿ. ಮುರಳೀಧರನ್, ರಾಜ್ಯ ಲೋಕೋಪಯೋಗಿ-ಪ್ರವಾಸೋದ್ಯಮ ಖಾತೆ ಸಚಿವ ಮಹಮ್ಮದ್ ರಿಯಾಸ್ ಸೇರಿದಂತೆ ಹಲವು ಮಂದಿ ಮುಖಂಡರು ಪಾಲ್ಗೊಳ್ಳುವರು. ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದ್ದು, ಕಾರ್ಯಕ್ರಮದ ಅಂತಿಮ ಪಟ್ಟಿ ತಯಾರಾಗಬೇಕಗಿದೆ.
ಕಾರ್ಯಕ್ರಮದ ಯಶಸ್ವಿಗಾಗಿ ತಾಳಿಪಡ್ಪು ಮೈದಾನದಲ್ಲಿ ಸಿದ್ಧತಾಕಾರ್ಯ ನಡೆಯುತ್ತಿದೆ. ಕಾಸರಗೋಡು ಜಿಲ್ಲೆಗೆ ಕೇಂದ್ರ ಸಚಿವರು ಕೆಲವೊಂದು ಅಚ್ಛರಿಯ ಕೊಡುಗೆಗಳನ್ನು ಘೋಷಿಸುವ ಸಾಧ್ಯತೆಯಿದೆ. ಲೋಕಸಭಾ ಚುನಾವಣೆ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೆಂದ್ರದಿಂದ ಕೇರಳಕ್ಕೆ ಮಹತ್ವದ ಕೊಡುಗೆ ಲಭಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಕೇಂದ್ರ ಸಚಿವರುಗಳು, ಮುಖ್ಯಮಂತ್ರಿ, ರಾಜ್ಯಪಾಲ ಕಾಸರಗೋಡಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಈಗಾಗಲೇ ಆರಂಭಗೊಂಡಿದೆ.