ನವದೆಹಲಿ: ದೆಹಲಿಯ ಏರೋಸಿಟಿಯ ಹೋಟೆಲ್ ಒಂದಕ್ಕೆ ಸರಿಸುಮಾರು ₹6 ಲಕ್ಷ ವಂಚಿಸಿರುವ ಆರೋಪದ ಅಡಿಯಲ್ಲಿ ಬಂಧಿಸಿರುವ ಮಹಿಳೆಯೊಬ್ಬಳ ಬ್ಯಾಂಕ್ ಖಾತೆಯಲ್ಲಿ ಇದ್ದಿದ್ದು ₹41 ಮಾತ್ರ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಮಹಿಳೆಯ ಬಂಧನ ಆದ ಸಮಯದಲ್ಲಿ ಇದ್ದ ಮೊತ್ತ ಇದು.
ನವದೆಹಲಿ: ದೆಹಲಿಯ ಏರೋಸಿಟಿಯ ಹೋಟೆಲ್ ಒಂದಕ್ಕೆ ಸರಿಸುಮಾರು ₹6 ಲಕ್ಷ ವಂಚಿಸಿರುವ ಆರೋಪದ ಅಡಿಯಲ್ಲಿ ಬಂಧಿಸಿರುವ ಮಹಿಳೆಯೊಬ್ಬಳ ಬ್ಯಾಂಕ್ ಖಾತೆಯಲ್ಲಿ ಇದ್ದಿದ್ದು ₹41 ಮಾತ್ರ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಮಹಿಳೆಯ ಬಂಧನ ಆದ ಸಮಯದಲ್ಲಿ ಇದ್ದ ಮೊತ್ತ ಇದು.
ಆಂಧ್ರಪ್ರದೇಶ ಮೂಲದ ಈ ಮಹಿಳೆ ವಿಮಾನ ನಿಲ್ದಾಣದ ಬಳಿ ವಾಸ್ತವ್ಯ ಹೂಡಿದ್ದಕ್ಕೆ ಕಾರಣವೇನು ಎಂಬುದು ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಮಹಿಳೆಯ ವಿಳಾಸ ಮತ್ತು ಆಕೆಯ ಕುಟುಂಬದ ಸದಸ್ಯರ ವಿವರ ನೀಡುವಂತೆ ಕೋರಿ ದೆಹಲಿ ಪೊಲೀಸರು ಆಂಧ್ರಪ್ರದೇಶ ಪೊಲೀಸರಿಗೆ ಪತ್ರ ಬರೆದಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 'ಮಹಿಳೆಯನ್ನು ವಿಚಾರಣೆಗೆ ಗುರಿಪಡಿಸಲಾಗಿದೆ, ನಮ್ಮ ತಜ್ಞರು ಆಕೆಯ ಜೊತೆ ಆಪ್ತ ಸಮಾಲೋಚನೆ ನಡೆಸಿದ್ದಾರೆ. ಆದರೆ ಆಕೆ ತನಿಖೆಗೆ ಸಹಕರಿಸುತ್ತಿಲ್ಲ. ಬ್ಯಾಂಕ್ ಖಾತೆಯ ವಿವರ ತೋರಿಸುವಂತೆ ಕೇಳಿದ್ದರೂ, ಅದನ್ನು ನೀಡಲು ಆಕೆಗೆ ಆಗಿಲ್ಲ' ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಹಿಳೆಯ ಹೆಸರು ಝಾನ್ಸಿ ರಾಣಿ ಸಾಮ್ಯುಯೆಲ್. ಈಕೆ ವಿಮಾನ ನಿಲ್ದಾಣಕ್ಕೆ ಸನಿಹದಲ್ಲಿ ಇರುವ ಪುಲ್‌ಮ್ಯಾನ್ ಹೋಟೆಲ್‌ನಲ್ಲಿ 15 ದಿನ ತಂಗಿದ್ದಳು. ಹೋಟೆಲ್‌ನ 'ಸ್ಪಾ'ದಲ್ಲಿ ತನ್ನ ಹೆಸರನ್ನು ಇಶಾ ದವೆ ಎಂದು ಹೇಳಿಕೊಂಡಿದ್ದಳು, ಅಲ್ಲಿ ₹2.11 ಲಕ್ಷ ಮೌಲ್ಯದ ಸೇವೆಗಳನ್ನು ಪಡೆದುಕೊಂಡಿದ್ದಳು ಎಂದು ಹೋಟೆಲ್‌ನ ಸಿಬ್ಬಂದಿ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಐಸಿಐಸಿಐ ಬ್ಯಾಂಕ್‌ನ ಯುಪಿಐ ಆಯಪ್ ಮೂಲಕ ಹಣ ಪಾವತಿ ಮಾಡಿರುವುದಾಗಿ ಆಕೆ ಹೋಟೆಲ್ ಸಿಬ್ಬಂದಿಗೆ ತೋರಿಸಿದ್ದಳು. ಆದರೆ ಪಾವತಿ ವಿವರಗಳನ್ನು ತಾಳೆ ಮಾಡಿ ನೋಡಿದಾಗ, ಪಾವತಿ ಸ್ವೀಕೃತವಾಗಿಲ್ಲ ಎನ್ನುವುದು ಗೊತ್ತಾಯಿತು. 'ಆಕೆ ಬಳಸಿದ ಆಯಪ್ ನಕಲಿ ಎಂದು ಶಂಕಿಸಲಾಗಿದೆ' ಎಂದು ಅಧಿಕಾರಿ ಹೇಳಿದರು.
ತಾನು ವೈದ್ಯೆ ಮತ್ತು ತನ್ನ ಪತಿ ಕೂಡ ವೈದ್ಯ, ಅವರು ನ್ಯೂಯಾರ್ಕ್‌ನಲ್ಲಿ ಇರುತ್ತಾರೆ ಎಂದು ಮಹಿಳೆಯು ಪೊಲೀಸರಿಗೆ ಆರಂಭದಲ್ಲಿ ಹೇಳಿದ್ದಳು. ಆದರೆ ಆಕೆ ಹೇಳಿದ್ದು ನಿಜವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ. ಹೋಟೆಲ್ ಸಿಬ್ಬಂದಿ ನೀಡಿದ ದೂರು ಆಧರಿಸಿ ಪೊಲೀಸರು ಈಕೆಯನ್ನು ಜನವರಿ 13ರಂದು ಬಂಧಿಸಿದ್ದಾರೆ.