ಕೊಲಂಬೊ: ತನ್ನ ಜಲ ಗಡಿಯನ್ನು ದಾಟಿದ ಆರೋಪದಲ್ಲಿ ಆರು ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ. ಅವರ ದೋಣಿಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕೃತ ಪ್ರಕಟಣೆಯೊಂದು ಮಂಗಳವಾರ ತಿಳಿಸಿದೆ.
ತಿಂಗಳ ಅವಧಿಯಲ್ಲಿ ಇಂಥ ಘಟನೆ ಆಗುತ್ತಿರುವುದು ಇದು ನಾಲ್ಕನೇ ಬಾರಿ.
ಡೆಲ್ಫ್ ದ್ವೀಪದ ಉತ್ತರದಲ್ಲಿ ಸೋಮವಾರ ಆರು ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ. ಎರಡು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಶ್ರೀಲಂಕಾದ ನೌಕಾಪಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಬಂಧಿತ ಮೀನುಗಾರರನ್ನು ಕಂಕಾಸಂತುರೈ ಬಂದರಿಗೆ ಕರೆದುಕೊಂಡು ಹೋಗಲಾಗಿದ್ದು, ಅಲ್ಲಿ ಮುಂದಿನ ಕ್ರಮಕ್ಕಾಗಿ ಮೈಲಾಡಿ ಮೀನುಗಾರಿಕಾ ಇನ್‌ಸ್ಪೆಕ್ಟರ್ ಅವರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಕಳೆದ ವಾರವೂ ಇದೇ ಆರೋಪದಲ್ಲಿ 18 ಭಾರತೀಯ ಮೀನುಗಾರರನ್ನು ಶ್ರೀಲಂಕಾದ ನೌಕಾಪಡೆ ಬಂಧಿಸಿತ್ತು. ಎರಡು ದೋಣಿಗಳನ್ನು ವಶಕ್ಕೆ ಪಡೆದಿತ್ತು.
ಭಾರತ ಹಾಗೂ ಶ್ರೀಲಂಕಾ ನಡುವಿನ ಈ ಸಮಸ್ಯೆ ನಿರಂತರವಾಗಿದ್ದು, ಪಾಕ್ ಜಲಸಂಧಿಯಲ್ಲಿ ಹಲವು ಬಾರಿ ಭಾರತೀಯ ಮೀನುಗಾರರ ಮೇಲೆ ಗುಂಡಿನ ದಾಳಿ ನಡೆಸಿ, ಅವರ ದೋಣಿಗಳನ್ನು ವಶಪಡಿಸಿಕೊಂಡ ಘಟನೆ ಕೂಡ ನಡೆದಿದೆ.
ಪಾಕ್ ಜಲಸಂಧಿ ತಮಿಳುನಾಡು ಹಾಗೂ ಶ್ರೀಲಂಕಾವನ್ನು ಬೇರ್ಪಡಿಸುವ ನೀರಿನ ಕಿರಿದಾದ ಪ್ರದೇಶವಾಗಿದ್ದು, ಉಭಯ ರಾಷ್ಟ್ರಗಳ ಮೀನುಗಾರರಿಗೆ ಸಮೃದ್ಧವಾಗಿ ಮೀನು ದೊರೆಯುವ ಸ್ಥಳವಾಗಿದೆ.