ಟೋಕಿಯೊ: ಮಧ್ಯ ಜಪಾನ್‌ನಲ್ಲಿ ಸೋಮವಾರ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪದ ಹಿನ್ನೆಲೆಯಲ್ಲಿ ಸಮುದ್ರದಲ್ಲಿ 1.2 ಮೀಟರ್ ಎತ್ತರದ ಅಲೆ ಎದ್ದಿದೆ ಎಂದು ಹೇಳಲಾಗಿದೆ. ಈ ಕಾರಣದಿಂದಾಗಿ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ತಿಳಿಸಿದೆ.
ಜಪಾನಿನ ಅನಾಮಿಝುವಿನಿಂದ ಈಶಾನ್ಯಕ್ಕೆ 42 ಕಿ.ಮೀ ದೂರದಲ್ಲಿ (ಸ್ಥಳೀಯ ಕಾಲಮಾನ) ಸಂಜೆ 4:10ಕ್ಕೆ ಭೂಕಂಪ ಸಂಭವಿಸಿದೆ. ಯುಎಸ್‌ಜಿಎಸ್ ಪ್ರಕಾರ 10 ಕಿ.ಮೀ ಅಳದಲ್ಲಿ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ಎನ್‌ಎಚ್‌ಕೆ ವರದಿ ಮಾಡಿದೆ.
ಜಪಾನ್ ಸಮುದ್ರ ತೀರದ ನಿಗಾಟಾ, ಟೊಯಾಮಾ, ಯಮಗಾಟಾ, ಫುಕುಯಿ ಮತ್ತು ಹ್ಯೊಗೊ ಪ್ರಾಂತ್ಯಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಜತೆಗೆ ಇಶಿಕಾವಾ, ನಿಗಾಟಾ, ಟೊಯಾಮಾ ಮತ್ತು ಯಮಗಾಟಾ ಪ್ರಾಂತ್ಯಗಳ ಜನರು ತಕ್ಷಣ ಎತ್ತರದ ಪ್ರದೇಶಕ್ಕೆ ಸ್ಥಳಾಂತಗೊಳ್ಳುವಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.
ಭೂಕಂಪದಿಂದ ಉಂಟಾದ ಹಾನಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.