HEALTH TIPS

8 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಭಾರತೀಯ ವಾಯುಪಡೆ ವಿಮಾನ ಅವಶೇಷ ಈಗ ಪತ್ತೆ!

              ವದೆಹಲಿ: ಎಂಟು ವರ್ಷಗಳ ಹಿಂದೆ ಬಂಗಾಳ ಕೊಲ್ಲಿ ಮೇಲೆ ಹಾರಾಟ ನಡೆಸುವ ವೇಳೆ ನಾಪತ್ತೆಯಾಗಿದ್ದ ವಾಯುಪಡೆಯ ಸಾರಿಗೆ ವಿಮಾನ 'ಎಎನ್-32'ರ ಅವಶೇಷಗಳನ್ನು ಭಾರತೀಯ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

               ಚೆನ್ನೈ ಕರಾವಳಿಯಿಂದ 310 ಕಿ.ಮೀ. (ಅಂದಾಜು 140 ನಾಟಿಕಲ್ ಮೈಲು) ದೂರದಲ್ಲಿ ಬಂಗಾಳ ಕೊಲ್ಲಿಯಲ್ಲಿ 3.4 ಕಿ.ಮೀ.

               ಆಳದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ ಎಂದು ವಾಯುಪಡೆ ಶುಕ್ರವಾರ ತಿಳಿಸಿದೆ.

ಈ ನತದೃಷ್ಟ ವಿಮಾನದಲ್ಲಿ 29 ಸಿಬ್ಬಂದಿ ಇದ್ದರು. 2016ರ ಜುಲೈ 22ರಂದು ಈ ವಿಮಾನ (ಕೆ-2743) ತಾಂಬರಮ್ ವಾಯುನೆಲೆಯಿಂದ ಪೋರ್ಟ್‌ಬ್ಲೇರ್‌ಗೆ ಹೊರಡುವುದಿತ್ತು. ಟೇಕಾಫ್‌ ಆದ ಕೆಲವೇ ನಿಮಿಷಗಳಲ್ಲಿ ನಾಪತ್ತೆಯಾಗಿತ್ತು.

               'ಅವಶೇಷಗಳು ಪತ್ತೆಯಾಗಿರುವ ಸ್ಥಳದಲ್ಲಿ ಇತರ ಯಾವುದೇ ವಿಮಾನ ಅವಘಡ ಸಂಭವಿಸಿರುವ ಬಗ್ಗೆ ದಾಖಲೆಗಳು ಇಲ್ಲ. ಹೀಗಾಗಿ ಈ ಅವಶೇಷಗಳು ಎಎನ್‌-32 ವಿಮಾನಕ್ಕೆ ಸೇರಿದ್ದವು ಎಂಬುದರತ್ತ ಈ ಅಂಶ ಬೊಟ್ಟು ಮಾಡುತ್ತದೆ' ಎಂದೂ ವಾಯುಪಡೆ ತಿಳಿಸಿದೆ.

               ಚೆನ್ನೈನಲ್ಲಿರುವ ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ (ಎನ್‌ಐಒಟಿ) ವಿಜ್ಞಾನಿಗಳು ಈ ವಿಮಾನದ ಅವಶೇಷಗಳ ಪತ್ತೆಗಾಗಿ ಆಳ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸಬಲ್ಲ ವಾಹನವನ್ನು (ಎಯುವಿ) ಅವಘಡ ಸಂಭವಿಸಿದ್ದ ಸ್ಥಳದಲ್ಲಿ ನಿಯೋಜಿಸಿದ್ದರು. ಈ ವಾಹನವು 3.4 ಕಿ.ಮೀ. ಆಳದಲ್ಲಿ ವಿಮಾನದ ಅವಶೇಷಗಳನ್ನು ಪತ್ತೆ ಹಚ್ಚಿದೆ.

               'ಇದು ಆಕಸ್ಮಿಕವಾಗಿ ಪತ್ತೆಯಾಗಿದೆ. ಹಿಂದೂ ಮಹಾಸಾಗರದಲ್ಲಿ ಆಳ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸಬೇಕಿತ್ತು. ಇದಕ್ಕಾಗಿ ಕಳೆದ ವಾರ, ಎಯುವಿ ಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಆಗ, ಈ ಎಯುವಿ ಅವಶೇಷಗಳ ಮೊದಲ ಚಿತ್ರಗಳನ್ನು ಸೆರೆ ಹಿಡಿಯಿತು. ತಕ್ಷಣವೇ ನಾವು ವಾಯುಪಡೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಅವರು, ಈ ಅವಶೇಷಗಳು ನಾಪತ್ತೆಯಾಗಿದ್ದ ವಿಮಾನದ್ದವು ಎಂಬುದನ್ನು ದೃಢಪಡಿಸಿದರು' ಎಂದು ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರವಿಚಂದ್ರನ್‌ ಅವರು 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.

'ಎನ್‌ಐಒಟಿ ನಿಯೋಜಿಸಿದ್ದ ಎಯುವಿಯಲ್ಲಿ ಮಲ್ಟಿ ಬೀಮ್‌ ಸೋನಾರ್ ಸೇರಿದಂತೆ ಅತ್ಯಾಧುನಿಕ ಸಾಧನಗಳನ್ನು ಅಳವಡಿಸಲಾಗಿತ್ತು. ಇದರಿಂದ ಅವಶೇಷಗಳ ಪತ್ತೆ ಸಾಧ್ಯವಾಯಿತು' ಎಂದು ಭಾರತೀಯ ವಾಯುಪಡೆ ವಕ್ತಾರ ತಿಳಿಸಿದ್ದಾರೆ.

ಹಲವು ಪ್ರಯತ್ನಗಳು ಫಲ ನೀಡಿರಲಿಲ್ಲ

                  ಈ ವಿಮಾನ ನಾಪತ್ತೆ ಪ್ರಕರಣವನ್ನು ಭಾರತದ ವಿಮಾನಯಾನ ಇತಿಹಾಸದಲ್ಲಿಯೇ ಅತ್ಯಂತ ನಿಗೂಢ ವಿದ್ಯಮಾನ ಎಂದು ಪರಿಗಣಿಸಲಾಗಿತ್ತು. ನೌಕಾಪಡೆ ಕರಾವಳಿ ರಕ್ಷಣಾ ಪಡೆಗಳ ಹಡಗುಗಳನ್ನು ಬಳಸಿ ವ್ಯಾಪಕ ಶೋಧ ನಡೆಸಲಾಗಿತ್ತು. ಇಸ್ರೊ ಉಪಗ್ರಹಣ ನೆರವನ್ನು ಸಹ ಪಡೆಯಲಾಗಿತ್ತು. ಈ ಎಲ್ಲ ಪ್ರಯತ್ನಗಳು ಫಲ ನೀಡಿರಲಿಲ್ಲ. ಮತ್ತೊಂದೆಡೆ ಪ್ರತಿಕೂಲ ಹವಾಮಾನದಿಂದಾಗಿ ಪ್ರಬಲ ಮಾರುತುಗಳು ಬೀಸುತ್ತಿದ್ದವು. ಇದು ಕೂಡ ಶೋಧ ಕಾರ್ಯಕ್ಕೆ ದೊಡ್ಡ ಅಡಚಣೆಯಾಗಿತ್ತು. 'ನಾಪತ್ತೆಯಾಗುವುದಕ್ಕೂ ಮುನ್ನ ಈ ವಿಮಾನದಿಂದ ಯಾವುದೇ ತುರ್ತು ಸೂಚನೆ ರವಾನೆಯಾಗಿರಲಿಲ್ಲ. ತಾಂಬರಮ್‌ ವಾಯುನೆಲೆಯಿಂದ ಬೆಳಿಗ್ಗೆ 8.30ಕ್ಕೆ ಟೇಕಾಫ್‌ ಆಗಿದ್ದ ಈ ವಿಮಾನ 11.30ಕ್ಕೆ ಪೋರ್ಟ್‌ಬ್ಲೇರ್‌ನಲ್ಲಿ ಇಳಿಯಬೇಕಿತ್ತು. ಆದರೆ 8.46ಕ್ಕೆ ವಿಮಾನವು ಚೆನ್ನೈನಲ್ಲಿರುವ ವಿಮಾನ ಸಂಚಾರ ನಿಯಂತ್ರಣಾಧಿಕಾರಿ ಜೊತೆ ಕೊನೆ ಸಂಪರ್ಕ ಮಾಡಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries