HEALTH TIPS

9 ವರ್ಷಗಳಲ್ಲಿ ದೇಶದ 25 ಕೋಟಿ ಮಂದಿ ಬಡತನ ಮುಕ್ತ: ನೀತಿ ಆಯೋಗ

           ನವದೆಹಲಿ: ಕಳೆದ 9 ವರ್ಷಗಳಲ್ಲಿ ದೇಶದಲ್ಲಿನ ಸುಮಾರು 25 ಕೋಟಿ ಮಂದಿ ಬಡತನದಿಂದ ಮುಕ್ತರಾಗಿದ್ದಾರೆ ಎಂದು ನೀತಿ ಆಯೋಗ ಹೇಳಿದೆ.

            NITI ಆಯೋಗದ ವರದಿಯ ಪ್ರಕಾರ, 2013-14ರಲ್ಲಿ ದೇಶದಲ್ಲಿ ಬಹು ಆಯಾಮದ ಬಡತನವು ಶೇಕಡಾ 29.17 ರಷ್ಟಿತ್ತು, ಇದು 2022-23 ರಲ್ಲಿ ಶೇಕಡಾ 11.28 ಕ್ಕೆ ಇಳಿದಿದೆ. ಇದರೊಂದಿಗೆ ಈ ಅವಧಿಯಲ್ಲಿ 24.82 ಕೋಟಿ ಜನರು ಬಹು ಆಯಾಮದ ಬಡತನದಿಂದ ಹೊರ ಬಂದಿದ್ದಾರೆ ಎಂದು ತಿಳಿದು ಬಂದಿದೆ. 2013-14ರಿಂದ 2022-23ರವರೆಗಿನ ಒಂಬತ್ತು ವರ್ಷಗಳಲ್ಲಿ 24.82 ಕೋಟಿ ಜನರು ಬಹುಆಯಾಮದ ಬಡತನದಿಂದ ಹೊರಬಂದಿದ್ದಾರೆ. ಬಡತನದಿಂದ ಹೊರಬಂದಿರುವ ರಾಜ್ಯಗಳಲ್ಲಿ ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶ ಮುಂಚೂಣಿಯಲ್ಲಿವೆ ಎಂದು ನೀತಿ ಆಯೋಗ ವರದಿಯಲ್ಲಿ ಉಲ್ಲೇಖಿಸಲಾಗಿದೆ.


             ರಾಜ್ಯ ಮಟ್ಟದಲ್ಲಿ ಉತ್ತರ ಪ್ರದೇಶ ಪ್ರಥಮ ಸ್ಥಾನದಲ್ಲಿದ್ದು, ಇಲ್ಲಿ 5.94 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಬಿಹಾರ ದ್ವಿತೀಯ ಸ್ಥಾನದಲ್ಲಿ (3.77 ಕೋಟಿ) ಮತ್ತು ನಂತರದ ಶ್ರೇಯಾಂಕದಲ್ಲಿ ಮಧ್ಯಪ್ರದೇಶ (2.30 ಕೋಟಿ) ಇದ್ದು, ನಂತರದ ಸ್ಥಾನದಲ್ಲಿ ರಾಜಸ್ಥಾನ (1.87 ಕೋಟಿ) ಇದೆ.

              ಈ ಬಗ್ಗೆ ಮಾಹಿತಿ ನೀಡಿದ ನೀತಿ ಆಯೋಗದ ಸದಸ್ಯ ರಮೇಶ ಚಂದ್ ಅವರು, "ಕಳೆದ 9 ವರ್ಷಗಳಲ್ಲಿ ವಾರ್ಷಿಕವಾಗಿ 2.75 ಕೋಟಿ ಜನರು ಬಡತನದಿಂದ ಪಾರಾಗಿದ್ದಾರೆ. ಸರ್ಕಾರ ಬಹುಆಯಾಮಗಳ ಬಡತನವನ್ನು ಶೇ.1ಕ್ಕಿಂತ ಕೆಳತರುವ ಗುರಿ ಇಟ್ಟುಕೊಂಡಿದೆ. ಅದಕ್ಕಾಗಿ ಸರ್ವ ಪ್ರಯತ್ನಗಳನ್ನೂ ಕೈಗೊಂಡಿದೆ" ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

          ವರದಿಯು 2030 ಕ್ಕಿಂತ ಮುಂಚೆಯೇ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (SDGs) ಸಾಧಿಸುವ ದೇಶದ ಪ್ರಗತಿಯನ್ನು ಎತ್ತಿ ತೋರಿಸಿದೆ. ಪೋಶಣ್ ಅಭಿಯಾನ, ರಕ್ತಹೀನತೆ ಮುಕ್ತ ಭಾರತ ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಂತಹ ಸರ್ಕಾರದ ಉಪಕ್ರಮಗಳು ಈ ಸಾಧನೆಗೆ ಮನ್ನಣೆ ನೀಡಿವೆ.

                        ಬಹುಆಯಾಮದ ಬಡತನ ಎಂದರೇನು?
            ಬಹುಆಯಾಮದ ಬಡತನವನ್ನು ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟ ಸುಧಾರಣೆಯಿಂದ ಅಳೆಯಲಾಗುತ್ತದೆ. ನೀತಿ ಆಯೋಗದ ವರದಿಯನುಸಾರ, ದೇಶದಲ್ಲಿ ಬಹುಆಯಾಮದ ಬಡತನವು 2013-14ರಲ್ಲಿ ಶೇಕಡಾ 29.17ರಿಂದ 2022-23ರಲ್ಲಿ ಶೇ.11.28ಕ್ಕೆ ಇಳಿದಿದೆ. ಬಹುಆಯಾಮದ ಬಡತನವು 12 ಸುಸ್ಥಿರ ಅಭಿವೃದ್ಧಿ ಗುರಿಗಳು ಒಳಗೊಂಡಿರುವ ಸೂಚಕಗಳನ್ನು ಪ್ರತಿನಿಧಿಸುತ್ತವೆ. ಇವುಗಳಲ್ಲಿ ಪೌಷ್ಟಿಕತೆ, ಮಕ್ಕಳು ಮತ್ತು ಹದಿಹರೆಯದವರ ಮರಣ, ತಾಯಿಯ ಆರೋಗ್ಯ, ಶಾಲಾ ಶಿಕ್ಷಣ, ಶಾಲಾ ಹಾಜರಾತಿ, ಅಡುಗೆ ಇಂಧನ, ನೈರ್ಮಲ್ಯ, ಕುಡಿಯುವ ನೀರು, ವಿದ್ಯುತ್, ವಸತಿ, ಆಸ್ತಿಗಳು ಮತ್ತು ಬ್ಯಾಂಕ್ ಖಾತೆಗಳು ಸೇರಿವೆ.

                      ಬಡತನದ ಸುಧಾರಣೆಯನ್ನು ಹೇಗೆ ಅಳೆಯಲಾಗುತ್ತದೆ?
            ರಾಷ್ಟ್ರೀಯ ಬಹು ಆಯಾಮದ ಬಡತನವು ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟದಲ್ಲಿನ ಕೊರತೆಯ ಸ್ಥಿತಿಯನ್ನು ಅಳೆಯುತ್ತದೆ ಎಂದು ಆಯೋಗವು ಹೇಳಿದೆ. 12 ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಲಿಂಕ್ ಮಾಡಲಾದ ಸೂಚಕಗಳ ಮೂಲಕ ಬಹು ಆಯಾಮದ ಬಡತನವನ್ನು ನಿರ್ಧರಿಸಲಾಗುತ್ತದೆ. ಇವುಗಳಲ್ಲಿ ಪೌಷ್ಠಿಕಾಂಶ, ಮಕ್ಕಳ ಮತ್ತು ಹದಿಹರೆಯದವರ ಮರಣ, ತಾಯಿಯ ಆರೋಗ್ಯ, ಶಾಲಾ ಶಿಕ್ಷಣದ ವರ್ಷಗಳು, ಶಾಲಾ ಹಾಜರಾತಿ, ಅಡುಗೆ ಇಂಧನ, ನೈರ್ಮಲ್ಯ, ಕುಡಿಯುವ ನೀರು, ವಿದ್ಯುತ್, ವಸತಿ, ಆಸ್ತಿಗಳು ಮತ್ತು ಬ್ಯಾಂಕ್ ಖಾತೆಗಳು ಸೇರಿವೆ.

                        ಭಾರತದ ಪರಿಸ್ಥಿತಿ ಇತರ ದೇಶಗಳಿಗಿಂತ ಉತ್ತಮ!
             ಭಾರತದ ಪರಿಸ್ಥಿತಿ ಇತರ ದೇಶಗಳಿಗಿಂತ ಉತ್ತಮವಾಗಿದೆ ಎಂದು ತಿಳಿದು ಬಂದಿದ್ದು, ವಿಶ್ವದಾದ್ಯಂತ ಶ್ರೀಮಂತರು ಮತ್ತು ಬಡವರ ನಡುವೆ ಆರ್ಥಿಕ ಅಸಮಾನತೆ ಹೆಚ್ಚುತ್ತಿದೆ. ಇನ್ನೂ 229 ವರ್ಷಗಳ ಕಾಲ ಬಡತನ ಮುಂದುವರಿಯಲಿದೆ ಎಂದು ಆಕ್ಸ್‌ಫ್ಯಾಮ್ ವರದಿ ತನ್ನ ರಿಪೋರ್ಟ್‌ನಲ್ಲಿ ಎಚ್ಚರಿಕೆ ನೀಡಿದ ಬೆನ್ನಲ್ಲೇ NITI ಆಯೋಗದ ಈ ವರದಿ ಬಂದಿದೆ.

              ಆಕ್ಸ್‌ಫ್ಯಾಮ್ ವರದಿಯ ಪ್ರಕಾರ, ವಿಶ್ವದ 5 ಶ್ರೀಮಂತರ ಸಂಪತ್ತು 2020 ರಿಂದ 869 ಶತಕೋಟಿ ಡಾಲರ್‌ಗಳಿಗೆ ದ್ವಿಗುಣಗೊಂಡಿದೆ, ಆದರೆ ಇದೇ ಅವಧಿಯಲ್ಲಿ ವಿಶ್ವದಾದ್ಯಂತ 5 ಶತಕೋಟಿ ಜನರು ಬಡವರಾಗಿದ್ದಾರೆ ಎಂದು ತಿಳಿದು ಬಂದಿದೆ. ಶ್ರೀಮಂತರು ಮತ್ತು ಬಡವರ ನಡುವಿನ ಈ ಆರ್ಥಿಕ ಅಸಮಾನತೆಯು ಮುಂದುವರಿದರೆ, ಮುಂದಿನ 229 ವರ್ಷಗಳವರೆಗೆ ಪ್ರಪಂಚದಿಂದ ಬಡತನವು ನಿರ್ಮೂಲನೆಯಾಗುವುದಿಲ್ಲ ಎಂದು ವರದಿ ಎಚ್ಚರಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries