ಕಾಸರಗೋಡು: ಪರಪ್ಪ ಬ್ಲಾಕ್ ಪಂಚಾಯಿತಿಯ ವಾರ್ಷಿಕ ಯೋಜನೆಯ ಅಂಗವಾಗಿ ಕೇರಳ ನಾಲೆಡ್ಜ್ ಎಕಾನಮಿ ಮಿಷನ್, ಐಟಿಸಿ ಅಕಾಡೆಮಿ ಹಾಗೂ ಕುಟುಂಬಶ್ರೀ ಜಿಲ್ಲಾ ಮಿಷನ್ ಸಹಯೋಗದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 94 ಮಂದಿ ಉದ್ಯೋಗಾರ್ಥಿಗಳಿಗೆ ವಿವಿಧ ಸಂಸ್ಥೆಗಳಲ್ಲಿ ನೇರ ನೇಮಕಾತಿ ಲಭಿಸಿದೆ. 218 ಜನರನ್ನು ಶಾರ್ಟ್‍ಲಿಸ್ಟ್ ಮಾಡಲಾಗಿದೆ. ಬ್ಲಾಕ್ ಪಂಚಾಯಿತಿಯಲ್ಲಿ ವಿಶೇಷವಾಗಿ ಏರ್ಪಡಿಸಿದ್ದ ಸ್ಥಳಗಳಲ್ಲಿ ಆಯೋಜಿಸಿದ್ದ ಮೇಳದಲ್ಲಿ 347 ಅಭ್ಯರ್ಥಿಗಳು ಭಾಗವಹಿಸಿದ್ದರು.
ಆಟೋ ಬೆನ್ ಟ್ರಕ್ಕಿಂಗ್, ಮಾಹಿತಿ ಆಪ್ಸ್, ಯು.ಎಲ್‍ಟಿಎಸ್, ಎಲ್.ಐ.ಸಿ ಸೇರಿದಂತೆ ಸುಮಾರು 18 ಸೇವಾ ಪೂರೈಕೆದಾರ ಕಂಪನಿಗಳು ಮೇಳದಲ್ಲಿ ಪಾಲ್ಗೊಂಡಿತ್ತು.
ಬ್ಲಾಕ್ ಪಂಚಾಯತ್ ಕಾರ್ಯದರ್ಶಿ ಜೋಸೆಫ್ ಎಂ ಚಾಕೋ ಅಭ್ಯರ್ಥಿಗಳಿಗೆ ಆಫರ್ ಲೆಟರ್ ಹಸ್ತಾಂತರಿಸಲಾಗಿದೆ. ಮೇಳದಲ್ಲಿ ಬ್ಲಾಕ್ ಪಂಚಾಯಿತಿ ಜನಪ್ರತಿನಿಧಿಗಳ ಸಂಘಟನೆ, ನೌಕರರು, ಕೈಗಾರಿಕೆ ಇಲಾಖೆ, ರೀಬಿಲ್ಡ್ ಕೇರಳ ನೌಕರರು ಪಾಲ್ಗೊಂಡಿದ್ದರು.
ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೆ.ಕೈನಿಕ್ಕರ ಉದ್ಯೋಗ ಮೇಳ ಉದ್ಘಾಟಿಸಿದರು.
ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಎಂ.ಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಕೆ.ಭೂಪೇಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ರಜನಿ ಕೃಷ್ಣನ್, ಪಿ.ವಿ.ಚಂದ್ರನ್ ಮತ್ತು ಕೆ.ಪದ್ಮಾಕುಮಾರಿ, ಬ್ಲಾಕ್ ಪಂಚಾಯಿತಿ ಸದಸ್ಯ ಅರುಣ್ ರಂಗತ್ ಮಾಲಾ ಹಾಗೂ ಕುಟುಂಬಶ್ರೀ ಎಡಿಎಂಸಿ ಎಚ್.ಇಕ್ಬಾಲ್ ಉಪಸ್ಥಿತರಿದ್ದರು. ಬ್ಲಾಕ್ ಪಂಚಾಯಿತಿ ಜಂಟಿ ಬಿ.ಡಿ.ಒ. ಕೆ.ಜಿ.ಬಿಜುಕುಮಾರ್ ಸ್ವಾಗತಿಸಿದರು. ಕೈಗಾರಿಕಾ ಅಭಿವೃದ್ಧಿ ಅಧಿಕಾರಿ ಅಭಿನ್ ಮೋಹನ್ ವಂದಿಸಿದರು.