ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು 96 ಕೋಟಿ ಮತದಾರರು ಅರ್ಹರಾಗಿದ್ದು, ಕಳೆದ ಚುನಾವಣೆಗೆ ಹೋಲಿಸಿದರೆ ಮತದಾರರ ಸಂಖ್ಯೆಯು ಐದು ಕೋಟಿಯಷ್ಟು ಹೆಚ್ಚಳ ಆಗಿದೆ.
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು 96 ಕೋಟಿ ಮತದಾರರು ಅರ್ಹರಾಗಿದ್ದು, ಕಳೆದ ಚುನಾವಣೆಗೆ ಹೋಲಿಸಿದರೆ ಮತದಾರರ ಸಂಖ್ಯೆಯು ಐದು ಕೋಟಿಯಷ್ಟು ಹೆಚ್ಚಳ ಆಗಿದೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿರುವ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ (ಇಸಿ) ದೇಶದಾದ್ಯಂತ ಸುಮಾರು 12 ಲಕ್ಷ ಮತದಾನ ಕೇಂದ್ರಗಳನ್ನು ಸ್ಥಾಪಿಸಲಿದೆ.
2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದೇಶದಲ್ಲಿ ಮತದಾರರ ಸಂಖ್ಯೆ 91 ಕೋಟಿಯಷ್ಟಿತ್ತು. ಚುನಾವಣಾ ಆಯೋಗವು ಕಳೆದ ಬಾರಿ 10 ಲಕ್ಷದಷ್ಟು ಮತದಾನ ಕೇಂದ್ರಗಳನ್ನು ಸ್ಥಾಪಿಸಿತ್ತು.
ಚುನಾವಣಾ ಅಯೋಗ ಗುರುವಾರ ನವದೆಹಲಿಯಲ್ಲಿ '14ನೇ ರಾಷ್ಟ್ರೀಯ ಮತದಾರರ ದಿನ' ಆಚರಿಸಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, 'ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ವಿಸ್ತಾರ ಮತ್ತು ವೈವಿಧ್ಯತೆಯು ಹೆಮ್ಮೆಯ ವಿಷಯವಾಗಿದೆ' ಎಂದು ಹೇಳಿದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಅಯೋಗವು, 'ಚುನಾವ್ ಕಾ ಪರ್ವ್, ದೇಶ್ ಕಾ ಗರ್ವ್' (ಚುನಾವಣೆಯ ಹಬ್ಬ, ದೇಶದ ಹೆಮ್ಮೆ) ಎಂಬ ಘೋಷವಾಕ್ಯದಡಿ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿತು.
ಮುಂಬರುವ ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟಿಸಲು ಆಯೋಗವು ಸಿದ್ಧತೆ ನಡೆಸುತ್ತಿದೆ. 2014ರ ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಆ ವರ್ಷ ಮಾರ್ಚ್ 5 ರಂದು ಹಾಗೂ 2019ರ ಚುನಾವಣೆಯ ವೇಳಾಪಟ್ಟಿಯನ್ನು ಮಾರ್ಚ್ 10 ರಂದು ಪ್ರಕಟಿಸಿತ್ತು.