ನವದೆಹಲಿ: ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ದಾಖಲಾಗುವ ಪ್ರಮಾಣವು 2016ರಿಂದ 2022ರ ನಡುವಿನ ಅವಧಿಯಲ್ಲಿ ಶೇ 96ರಷ್ಟು ಹೆಚ್ಚಿದೆ ಎಂದು 'ಚೈಲ್ಡ್ ರೈಟ್ಸ್ ಆಯಂಡ್ ಯೂ' (ಸಿಆರ್‌ವೈ) ಸ್ವಯಂ ಸೇವಾ ಸಂಸ್ಥೆ ಹೇಳಿದೆ.
ನವದೆಹಲಿ: ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ದಾಖಲಾಗುವ ಪ್ರಮಾಣವು 2016ರಿಂದ 2022ರ ನಡುವಿನ ಅವಧಿಯಲ್ಲಿ ಶೇ 96ರಷ್ಟು ಹೆಚ್ಚಿದೆ ಎಂದು 'ಚೈಲ್ಡ್ ರೈಟ್ಸ್ ಆಯಂಡ್ ಯೂ' (ಸಿಆರ್‌ವೈ) ಸ್ವಯಂ ಸೇವಾ ಸಂಸ್ಥೆ ಹೇಳಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊದ (ಎನ್‌ಸಿಆರ್‌ಬಿ) ದತ್ತಾಂಶಗಳನ್ನು ವಿಶ್ಲೇಷಿಸಿ ಸಿಆರ್‌ವೈ ಈ ವರದಿ ನೀಡಿದೆ.
ಸಾರ್ವಜನಿಕರಲ್ಲಿ ಜಾಗೃತಿ ಮೂಡಿರುವ ಕಾರಣ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಾಗ ದಾಖಲಾಗುವ ದೂರುಗಳ ಪ್ರಮಾಣ ಹೆಚ್ಚಿದೆ ಎಂದು ಸಿಆರ್‌ವೈನ ಸಂಶೋಧನಾಂಶ ವಿಭಾಗದ ನಿರ್ದೇಶಕ ಶುಭೇಂದು ಭಟ್ಟಾಚಾರ್ಜಿ ಹೇಳಿದರು.
ಈಚೆಗೆ ಆಗಿರುವ ಕಾನೂನು ಸುಧಾರಣೆಗಳು ಮತ್ತು ನೀತಿಗಳ ಬದಲಾವಣೆ ಕೂಡ ಪ್ರಕರಣಗಳು ದಾಖಲಾಗಲು ಕಾರಣವಾಗಿದೆ ಎಂದು ಭಟ್ಟಾಚಾರ್ಜಿ ಹೇಳಿದ್ದಾರೆ. ಉನ್ನತ ಮಟ್ಟದ ಪ್ರಕರಣಗಳಲ್ಲಿ ಸಮುದಾಯಗಳು ಮತ್ತು ಸಂಘಟನೆಗಳ ಸಹಕಾರ, ಮಾಧ್ಯಮಗಳು ನಿರ್ವಹಿಸುವ ಪಾತ್ರವೂ ಹಿರಿದಾಗಿದೆ ಎಂದರು.
ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳು ಸೇರಿದಂತೆ ಸೂಕ್ಷ್ಮ ವಿಚಾರಗಳನ್ನು ಚರ್ಚಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಯತ್ನಿಸುವ ಮೂಲಕ ಸಮಾಜದಲ್ಲಿದ್ದ 'ಮೌನ ಸಂಸ್ಕೃತಿ'ಯನ್ನು ಮುರಿಯಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಕರಣಗಳನ್ನು ವರದಿ ಮಾಡುವ ಕಾರ್ಯವಿಧಾನಗಳು ಜನರಲ್ಲಿ ನಂಬಿಕೆ ಮೂಡಿಸಿವೆ. ಆನ್‌ಲೈನ್ ಪೋರ್ಟಲ್‌ಗಳು ಮತ್ತು ಕೆಲವು ಸಂಸ್ಥೆಗಳು ಇಂತಹ ಪ್ರಕರಣಗಳನ್ನು ದಾಖಲಿಸಲು ಸಂತ್ರಸ್ತ ಮಕ್ಕಳಿಗೆ ಮತ್ತು ಅವರ ಕುಟುಂಬಕ್ಕೆ ಪ್ರೋತ್ಸಾಹ ನೀಡುತ್ತಿವೆ ಎಂದರು.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ:
ದಾಖಲಾಗಿರುವ ಪ್ರಕರಣಗಳು
2016;19,765
2017;27,616
2018;30,917
2019;31,132
2020;30,705
2021;36,381
2022;38,911
(ಎನ್‌ಸಿಆರ್‌ಬಿ ದತ್ತಾಂಶ)