ಕೋಲ್ಕತ್ತ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ), ಬಾಲ ರಾಮ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಸೋಮವಾರ ಜಾಧವಪುರ ವಿಶ್ವವಿದ್ಯಾಲಯದಲ್ಲಿ ರಾಮನ ಆರಾಧನಾ ಕಾರ್ಯಕ್ರಮ ನಡೆಸಿತು.
ಇದೇ ವೇಳೆ ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಎಫ್‌ಐ) ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿತು.
'ರಾಮನ ಆರಾಧನೆ ಕಾರ್ಯಕ್ರಮದಲ್ಲಿ ಸುಮಾರು 50 ಮಂದಿ ಭಾಗವಹಿಸಿದ್ದರು. ಅಯೋಧ್ಯೆಯಲ್ಲಿ ನಡೆದ ಪ್ರಾಣ ಪ್ರತಿಷ್ಠಾಪನೆಯ ನೇರ ಪ್ರಸಾರವನ್ನು ವೀಕ್ಷಿಸಿದರು' ಎಂದು ಎಬಿವಿಪಿ ರಾಜ್ಯ ಸಮಿತಿ ನಾಯಕ ಸಂಪತ್‌ರಶಿ ಸರ್ಕಾರ್ ಪಿಟಿಐಗೆ ತಿಳಿಸಿದ್ದಾರೆ.
'ಎಬಿವಿಪಿ ಸದಸ್ಯರು ಹಾಗೂ ವಿದ್ಯಾರ್ಥಿಗಳ ಹೊರತಾಗಿ, ವಿಶ್ವವಿದ್ಯಾಲಯದ ಕೆಲ ಸಿಬ್ಬಂದಿಗಳೂ ಹಾಜರಿದ್ದರು. ಸಮಾರಂಭವು ಸಂಜೆವರೆಗೆ ನಡೆಯಲಿದೆ' ಎಂದು ಅವರು ತಿಳಿಸಿದರು.
'ಆರ್‌ಎಸ್‌ಎಸ್-ಬಿಜೆಪಿಯ ಕೋಮುವಾದಿ ಹಾಗೂ ಫ್ಯಾಸಿಸ್ಟ್ ಉದ್ದೇಶವನ್ನು ಕಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿ ಒಕ್ಕೂಟವು (ಎಎಫ್‌ಎಸ್‌ಯು) ತಿರಸ್ಕರಿಸುತ್ತದೆ. ನಾವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ಸಂಸ್ಕೃತಿಯನ್ನು, ಭಾರತದ ಪರಂಪರೆ ಮತ್ತು ಬಹುತ್ವದ ಲಕ್ಷಣ ಉಳಿಸುವ ಹಾಗೂ ಎತ್ತಿಹಿಡಿಯುವ ಚರ್ಚೆಗಳು ಹಾಗೂ ಸಿನಿಮಾ ಪ್ರದರ್ಶನ ನಡೆಸಿದೆವು' ಎಂದು ವಿಶ್ವವಿದ್ಯಾಲಯದ ಎಸ್‌ಎಫ್‌ಐ ನಾಯಕ ಸೌರಯದೀಪ್ತೊ ರಾಯ್ ಹೇಳಿದರು.
ಮಧ್ಯಾಹ್ನದವರೆಗೂ ವಿಶ್ವವಿದ್ಯಾಲಯದ ಆವರಣದಲ್ಲಿ ಎಸ್‌ಎಫ್‌ಐನಿಂದ ವಿವಿಧ ಕಾರ್ಯಕ್ರಮಗಳು ನಡೆದವು.
ಈ ಬಗ್ಗೆ ಅಖಿಲ ಬಂಗಾಲ ಶಿಕ್ಷಕರ ಒಕ್ಕೂಟ (ಎವಿಯುಟಿಎ), ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಶಿಕ್ಷಣ ಸಚಿವ ಬ್ರತ್ಯ ಬಸು, ರಾಜ್ಯಪಾಲ ಸಿ.ವಿ ಆನಂದ ಬೋಸ್ ಅವರಿಗೆ ಪತ್ರ ಬರೆದಿದ್ದು, 'ಕ್ಯಾಂಪಸ್‌ನಲ್ಲಿ ಧಾರ್ಮಿಕ ಆರಚಣೆಗಳನ್ನು ಕೈಗೊಳ್ಳುವುದು, ಜಾತ್ಯತೀತ ಸ್ಫೂರ್ತಿಯನ್ನು ಉಲ್ಲಂಘಿಸುತ್ತದೆ. ಶಿಕ್ಷಣಕ್ಕೂ, ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದುದು' ಎಂದು ಹೇಳಿದೆ.
'ಯಾವುದೇ ಸಂಘಟನೆಯಿಂದ ಏನಾದರೂ ಕಾರ್ಯಕ್ರಮ ನಡೆದರೆ ಅದಕ್ಕೆ ಸಂಸ್ಥೆ ಹೊಣೆಯಲ್ಲ. ಅದರಿಂದ ಕ್ಯಾಂಪಸ್‌ನ ಶಾಂತಿ ಅಥವಾ ಶೈಕ್ಷಣಿಕ ವಾತಾವರಣವನ್ನು ಹಾಳುಗೆಡವುದಿಲ್ಲ' ಎಂದು ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೆಮಿಸ್ಟರ್ ಪರೀಕ್ಷೆಗಳು ಸರಾಗವಾಗಿ ನಡೆಯುತ್ತಿದ್ದು, ವಿದ್ಯಾರ್ಥಿ ಸಂಘಟನೆಗಳಿಂದ ನಡೆಸಲಾದ ಯಾವುದೇ ಕಾರ್ಯಕ್ರಮಗಳ ಬಗ್ಗೆ ನಾವು ಪ್ರತಿಕ್ರಿಯಿಸುವುದಿಲ್ಲ' ಎಂದು ಅವರು ತಿಳಿಸಿದ್ದಾರೆ.