ನವದೆಹಲಿ: ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳು ಕ್ಷಮಾದಾನ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಪರಿಗಣಿಸುವಂತೆ ಗುಜರಾತ್ ಸರ್ಕಾರಕ್ಕೆ ಸೂಚಿಸಿ 2022ರ ಮೇ 13ರಂದು ಸುಪ್ರೀಂ ಕೋರ್ಟ್‌ನ ಇನ್ನೊಂದು ಪೀಠ ನೀಡಿದ್ದ ತೀರ್ಪನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭೂಯಾನ್ ಅವರಿದ್ದ ವಿಭಾಗೀಯ ಪೀಠವು ಅನೂರ್ಜಿತಗೊಳಿಸಿದೆ.
ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ (ಈಗ ನಿವೃತ್ತ) ಮತ್ತು ವಿಕ್ರಮ್ ನಾಥ್ ಅವರು ಇದ್ದ ಪೀಠವು 2022ರ ಮೇ ತಿಂಗಳಲ್ಲಿ ನೀಡಿದ್ದ ತೀರ್ಪಿನಲ್ಲಿ, ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿ ರಾಧೇಶ್ಯಾಮ್ ಶಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ಪರಿಗಣಿಸುವಂತೆ ಗುಜರಾತ್ ಸರ್ಕಾರಕ್ಕೆ ಸೂಚಿಸಿತ್ತು.
1992ರ ಜುಲೈ 9ರ ಕ್ಷಮಾದಾನ ನೀತಿಗೆ ಅನುಗುಣವಾಗಿ ಅರ್ಜಿಯನ್ನು ಪರಿಗಣಿಸಬೇಕು. ಅಪರಾಧ ಯಾವ ರಾಜ್ಯದಲ್ಲಿ ನಡೆದಿದೆಯೋ ಆ ರಾಜ್ಯದ ಸರ್ಕಾರವು ಅರ್ಜಿಯ ಬಗ್ಗೆ ತೀರ್ಮಾನಿಸುವ ಅಧಿಕಾರ ಹೊಂದಿದೆ ಎಂದು 2022ರ ಮೇ ತಿಂಗಳ ತೀರ್ಪಿನಲ್ಲಿ ಹೇಳಲಾಗಿತ್ತು. ಆದರೆ, ಶಾ ತನ್ನ ಅರ್ಜಿಯನ್ನು ಪರಿಗಣಿಸಲು ಸರ್ಕಾರಕ್ಕೆ ಸೂಚಿಸುವಂತೆ ಕೋರಿ 2019ರಲ್ಲಿ ಗುಜರಾತ್ ಹೈಕೋರ್ಟ್‌ನ ಮೊರೆ ಹೋಗಿದ್ದ ಎಂಬುದನ್ನು ಸೋಮವಾರದ ತೀರ್ಪಿನಲ್ಲಿ ವಿಭಾಗೀಯ ಪೀಠ ಉಲ್ಲೇಖಿಸಿದೆ.
'ಆದರೆ, 2019ರ ಜುಲೈ 17ರಂದು ಆ ಅರ್ಜಿಯನ್ನು ಇತ್ಯರ್ಥಪಡಿಸಿದ್ದ ಹೈಕೋರ್ಟ್, ರಾಧೇಶ್ಯಾಮ್ ಮಹಾರಾಷ್ಟ್ರ ಸರ್ಕಾರದ ಮೊರೆ ಹೋಗಬೇಕು, ಅದೇ ಸೂಕ್ತ ಎಂದು ಹೇಳಿತ್ತು. ಅಲ್ಲದೆ, ಗುಜರಾತ್ ಹೈಕೋರ್ಟ್‌ನಲ್ಲಿ ಈತ ಸಲ್ಲಿಸಿದ್ದ ಎರಡನೆಯ ಅರ್ಜಿಯು ಕೂಡ 2020ರಲ್ಲಿ ವಜಾಗೊಂಡಿತ್ತು' ಎಂದು ಸೋಮವಾರದ ತೀರ್ಪಿನಲ್ಲಿ ವಿವರಿಸಲಾಗಿದೆ.
ನಂತರ ಶಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ. ಆದರೆ, 2019ರಲ್ಲಿ ಹೈಕೋರ್ಟ್ ಆದೇಶ ಬಂದ 14 ದಿನಗಳೊಳಗೆ ತಾನು ಮಹಾರಾಷ್ಟ್ರ ಸರ್ಕಾರಕ್ಕೆ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದುದನ್ನು, ತನ್ನ ಪ್ರಕರಣದಲ್ಲಿ ಮುಂಬೈನ ಸಿಬಿಐ ವಿಶೇಷ ನ್ಯಾಯಾಧೀಶರು ಹಾಗೂ ಸಿಬಿಐ ನಕಾರಾತ್ಮಕ ಅಭಿಪ್ರಾಯ ನೀಡಿದ್ದುದನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸಿರಲಿಲ್ಲ.
'ಹೀಗಾಗಿ, ವಾಸ್ತವವನ್ನು ಮರೆಮಾಚಿ, ಈ ನ್ಯಾಯಾಲಯವನ್ನು ತಪ್ಪುದಾರಿಗೆ ಎಳೆಯಲಾಯಿತು. ರಾಧೇಶ್ಯಾಮ್‌ನ ಕ್ಷಮಾದಾನ ಅರ್ಜಿಯನ್ನು ಪರಿಗಣಿಸುವಂತೆ ಗುಜರಾತ್ ಸರ್ಕಾರಕ್ಕೆ ಸೂಚನೆ ನೀಡಲಾಯಿತು' ಎಂದು ಸೋಮವಾರದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ಕೋರ್ಟ್‌ನಿಂದ ತನ್ನ ಪರವಾಗಿ ತೀರ್ಪು ಪಡೆಯಲು ರಾಧೇಶ್ಯಾಮ್ ತಪ್ಪು ಹೇಳಿಕೆಯನ್ನು ಕೂಡ ನೀಡಿದ್ದ ಎಂದು ವಿಭಾಗೀಯ ಪೀಠವು ಹೇಳಿದೆ.
2019 ಹೈಕೋರ್ಟ್ ಆದೇಶವು ಸಮಾಧಾನಕರವಾಗಿ ಇಲ್ಲದಿದ್ದರೆ ರಾಧೇಶ್ಯಾಮ್ ಮೇಲ್ಮನವಿ ಸಲ್ಲಿಸಬಹುದಿತ್ತು. ಆದರೆ ಆತ ಹಾಗೆ ಮಾಡಲಿಲ್ಲ. ಬದಲಿಗೆ, ಮಹಾರಾಷ್ಟ್ರ ಸರ್ಕಾರಕ್ಕೆ 2019ರ ಆಗಸ್ಟ್‌ನಲ್ಲಿ ಕ್ಷಮಾದಾನ ಕೋರಿ ಮನವಿ ಸಲ್ಲಿಸಿದ. ತನ್ನ ವಿರುದ್ಧದ ಅಭಿಪ್ರಾಯ ನಕಾರಾತ್ಮಕವಾಗಿ ಬಂದಾಗ, ವಾಸ್ತವವನ್ನು ಮರೆಮಾಚಿ ಈತ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ, ಗುಜರಾತ್ ಸರ್ಕಾರಕ್ಕೆ ಸೂಚನೆ ನೀಡುವಂತೆ ಕೋರಿದ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
'ಈ ಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ವಾಸ್ತವವನ್ನು ಮರೆಮಾಚಲಾಗಿತ್ತು, ಕೋರ್ಟನ್ನು ತಪ್ಪುದಾರಿಗೆ ಎಳೆಯಲಾಗಿತ್ತು ಎಂಬುದು ನಮ್ಮ ಅಭಿಪ್ರಾಯ. ಹೀಗಾಗಿ, 2022ರ ಮೇ ತಿಂಗಳ ತೀರ್ಪನ್ನು ಕೋರ್ಟ್‌ಗೆ ವಂಚನೆ ಎಸಗಿ ಪಡೆಯಲಾಗಿತ್ತು. ಇದು ಅನೂರ್ಜಿತವಾಗುತ್ತದೆ' ಎಂದು ವಿಭಾಗೀಯ ಪೀಠವು ಹೇಳಿದೆ.