ರಿಲಯನ್ಸ್ ಜಿಯೋ ಚಂದಾದಾರರ ಸಂಖ್ಯೆಯಲ್ಲಿ ಹೆಚ್ಚಳಗೊಳಿಸಿ ಮುನ್ನಡೆದಿದೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ನವೆಂಬರ್ 2023 ರಲ್ಲಿ ಜಿಯೋ 34.5 ಲಕ್ಷ ಚಂದಾದಾರರನ್ನು ಸ್ವಾಧೀನಪಡಿಸಿಕೊಂಡಿದೆ.
17.5 ಲಕ್ಷ ಚಂದಾದಾರರನ್ನು ಹೊಂದಿರುವ ಏರ್‍ಟೆಲ್ ಎರಡನೇ ಸ್ಥಾನದಲ್ಲಿದೆ. ಇದೇ ವೇಳೆ, ವೊಡಾಪೋನ್ ಐಡಿಯಾ (ವಿಐ)10.7 ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ ಎಂದು ವರದಿ ತಿಳಿಸಿದೆ.
ಹಿಂದಿನ ತಿಂಗಳಿಗೆ ಹೋಲಿಸಿದರೆ ವೈರ್‍ಲೆಸ್ ಚಂದಾದಾರರ ಒಟ್ಟು ಸಂಖ್ಯೆಯು 0.28 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ. ಅಕ್ಟೋಬರ್‍ನಲ್ಲಿ 1,150.98 ಮಿಲಿಯನ್‍ನಿಂದ ನವೆಂಬರ್‍ನಲ್ಲಿ 1,154.17 ಮಿಲಿಯನ್‍ಗೆ ಏರಿದೆ. 10.15 ಮಿಲಿಯನ್ ಚಂದಾದಾರರನ್ನು ಹೊಂದಿರುವ ವೈರ್ಡ್ ಬ್ರಾಡ್‍ಬ್ಯಾಂಡ್ ಸೇವೆಗಳಲ್ಲಿ ಜಿಯೋ ಮುಂಚೂಣಿಯಲ್ಲಿದೆ.
ನಂತರದ ಸ್ಥಾನದಲ್ಲಿ ಭಾರ್ತಿ ಏರ್‍ಟೆಲ್ 7.28 ಮಿಲಿಯನ್ ಮತ್ತು ಬಿ.ಎಸ್.ಎನ್.ಎಲ್. 3.80 ಮಿಲಿಯನ್ ಚಂದಾದಾರರನ್ನು ಹೊಂದಿದೆ. ಆಟ್ರಿಯಾ ಕನ್ವರ್ಜೆನ್ಸ್ ಟೆಕ್ನಾಲಜೀಸ್ ಮತ್ತು ಒನ್‍ನೋಟ್ ಎಂಟರ್‍ಟೈನ್‍ಮೆಂಟ್ ಲಿಮಿಟೆಡ್ ಈ ಅವಧಿಯಲ್ಲಿ ಕ್ರಮವಾಗಿ 2.21 ಮಿಲಿಯನ್ ಮತ್ತು 1.14 ಮಿಲಿಯನ್ ಚಂದಾದಾರರನ್ನು ಪಡೆದುಕೊಂಡಿದೆ ಎಂದು ಟ್ರಾಯ್ ತಿಳಿಸಿದೆ. ನಗರ ಪ್ರದೇಶದ ವೈರ್‍ಲೆಸ್ ಚಂದಾದಾರಿಕೆಗಳು ನವೆಂಬರ್‍ನಲ್ಲಿ 630.72 ಮಿಲಿಯನ್‍ಗೆ ಏರಿಕೆಯಾಗಿದ್ದು, ಹಿಂದಿನ ತಿಂಗಳಲ್ಲಿ 630.36 ಮಿಲಿಯನ್ ಆಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಇದು 520.62 ದಶಲಕ್ಷದಿಂದ 523.45 ದಶಲಕ್ಷಕ್ಕೆ ಏರಿಕೆಯಾಗಿದೆ.
ನವೆಂಬರ್‍ನಲ್ಲಿ, 11.95 ಮಿಲಿಯನ್ ಚಂದಾದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಪೋರ್ಟ್ ಮಾಡಿದ್ದಾರೆ. ಮೊಬೈಲ್ ನಂಬರ್ ಪೋರ್ಟೆಬಿಲಿಟಿ (ಎಂಎನ್ ಪಿ) ಅನುಷ್ಠಾನದ ನಂತರ, ಎಂಎನ್ ಪಿ ಅಪ್ಲಿಕೇಶನ್‍ಗಳ ಸಲ್ಲಿಕೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. 914.75 ಬಿಲಿಯನ್ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅಕ್ಟೋಬರ್ ಅಂತ್ಯದಲ್ಲಿ 902.80 ಮಿಲಿಯನ್ ದಾಟಿತ್ತು.