ಟೋಕಿಯೋ: ಸೋಮವಾರ ಬೆಳಗ್ಗೆ ಈಶಾನ್ಯ ಜಪಾನ್ ನಲ್ಲಿ ಸಂಭವಿಸಿದ ಪ್ರಬಲ ಭೂಕಂಪನದ ಬಳಿಕ ಜಪಾನ್ ಕರಾವಳಿಗೆ ಸುನಾಮಿಯ ಮೊದಲ ಅಲೆಗಳು ಅಪ್ಪಳಿಸಿವೆ ಎಂದು ಹೇಳಲಾಗಿದೆ.
ಸೋಮವಾರ ಮಧ್ಯ ಜಪಾನ್‌ನಲ್ಲಿ 7.5ತೀವ್ರತೆಯ ಪ್ರಬಲವಾದ ಭೂಕಂಪ ಸಂಭವಿಸಿದ್ದು, ಅಮೆರಿಕ ಭೂ ಸರ್ವೇಕ್ಷಣಾ ಇಲಾಖೆ ಸುನಾಮಿ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ಇದೀಗ ಜಪಾನ್ ಕರಾವಳಿ ತೀರಕ್ಕೆ 1 ರಿಂದ 2 ಅಡಿ ಎತ್ತರದ ಸುನಾಮಿ ಅಲೆಗಳು ಅಪ್ಪಳಿಸಿವೆ ಎಂದು ಹೇಳಲಾಗಿದೆ. ಜಪಾನ್ ಇಶಿಕಾವಾ ಪ್ರಾಂತ್ಯದ ವಾಜಿಮಾ ನಗರಕ್ಕೆ 1.2 ಮೀಟರ್ ನಿಂದ 2 ಮೀಟರ್ ಗಳಷ್ಟು ಎತ್ತರದ ಸುನಾಮಿ ಅಲೆಗಳು ಬಂದಿರುವುದು ದೃಢಪಟ್ಟಿದೆ.
ಜಪಾನ್ ನ ಕರಾವಳಿ ಪ್ರದೇಶ ನೋಟೋದಲ್ಲೂ ಮೊದಲ ಸುನಾಮಿ ಅಲೆಗಳು ಅಪ್ಪಳಿಸಿರುವ ಕುರಿತು ವರದಿಯಾಗಿದ್ದು, ಈ ಅಲೆಗಳ ಎತ್ತರ 5 ಮೀಟರ್ ವರೆಗೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಜಪಾನ್ ಇಶಿಕಾವಾ ಪ್ರಿಫೆಕ್ಚರ್‌ನಲ್ಲಿರುವ ನೋಟೊ ಪ್ರದೇಶವು ಸುಮಾರು 4:10 pm (0710 GMT) ಸುಮಾರಿನಲ್ಲಿ ಭೂಕಂಪನದ ಬಳಿಕ ಸುನಾಮಿ ಭೀತಿ ಆವರಿಸಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಈ ಸುತ್ತಮುತ್ತಲಿನ ಜನರಿಗೆ ಎತ್ತರದ ನೆಲಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ. ಎಲ್ಲಾ ನಿವಾಸಿಗಳು ತಕ್ಷಣವೇ ಎತ್ತರದ ನೆಲಕ್ಕೆ ಸ್ಥಳಾಂತರಿಸಬೇಕು ಎಂದು ರಾಷ್ಟ್ರೀಯ ಪ್ರಸಾರಕ ಎನ್‌ಎಚ್‌ಕೆ ಭೂಕಂಪದ ನಂತರ ಎಚ್ಚರಿಕೆ ನೀಡಿದೆ.
ಜಪಾನ್ ಕರಾವಳಿಯಲ್ಲಿ ಭೂಕಂಪದ ಕೇಂದ್ರಬಿಂದುವಿನ 300 ಕಿಲೋಮೀಟರ್ (190 ಮೈಲುಗಳು) ಒಳಗೆ ಅಪಾಯಕಾರಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿತ್ತು. ಈ ಪ್ರಮಾಣದ ಭೂಕಂಪನ ಸುನಾಮಿ ಅಲೆಗಳ ಸೃಷ್ಟಿಗೆ ಕಾರಣವಾಗುತ್ತದೆ ಎಂದು ಹವಾಯಿ ಮೂಲದ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ತಿಳಿಸಿದೆ.
ಜಪಾನ್‌ನ ಪ್ರಮುಖ ದ್ವೀಪವಾದ ಹೊನ್‌ಶುವಿನ ಜಪಾನ್ ಸಮುದ್ರದ ಬದಿಯಲ್ಲಿರುವ ನೋಟೊ ಪ್ರದೇಶವು ಸ್ಥಳೀಯ ಕಾಲಮಾನ ಸಂಜೆ 4:06 ಕ್ಕೆ 5.7 ತೀವ್ರತೆಯ ಕಂಪನದೊಂದಿಗೆ ಪ್ರಾರಂಭವಾದ ಭೂಕಂಪಗಳ ತ್ವರಿತ ಅನುಕ್ರಮವನ್ನು ಅನುಭವಿಸಿತ್ತು. ಇಲ್ಲಿ ಪ್ರಬಲ ಭೂಕಂಪನದ ಬಳಿಕ ಅದರ ಸರಣಿ ಕಂಪನಗಳು ದಾಖಲಾಗಿವೆ. ಸ್ಥಳೀಯ ಕಾಲಮಾನ ಸಂಜೆ 4:10 ಕ್ಕೆ 7.6 ತೀವ್ರತೆಯ ಭೂಕಂಪನ ದಾಖಲಾಗಿದ್ದರೆ, ಸಂಜೆ 4:18 ಕ್ಕೆ 6.1 ರಷ್ಟು, 4:23 ಕ್ಕೆ 4.5 ರಷ್ಟು ಭೂಕಂಪನ ದಾಖಲಾಗಿದೆ. ಅಂತೆಯೇ 4:29 ಕ್ಕೆ 4.6 ರಷ್ಟು ಮತ್ತು 4.8 ರಷ್ಟು ಮತ್ತು ಸಂಜೆ 4:32 ಭೂಕಂಪನ ಸಂಭವಿಸಿದೆ.
ರಷ್ಯಾ, ಉತ್ತರ ಕೊರಿಯಾಗೂ ಸುನಾಮಿ ಭೀತಿ
ಜಪಾನ್ ಮಾತ್ರವಲ್ಲದೇ ನೆರೆಯ ರಾಷ್ಟ್ರಗಳಾದ ಉತ್ತರ ಕೊರಿಯಾ ಮತ್ತು ರಷ್ಯಾದಲ್ಲೂ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ಉಭಯ ರಾಷ್ಟ್ರಗಳಲ್ಲಿ ಸುನಾಮಿ ಅಲರ್ಟ್ ಘೋಷಣೆ ಮಾಡಲಾಗಿದ್ದು, ಅಧಿಕಾರಿಗಳು ಕರಾವಳಿ ಪ್ರಾಂತ್ಯದಲ್ಲಿನ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.
2011 ರಲ್ಲಿ ಭೂಕಂಪದ ನಂತರ ಸುನಾಮಿಯಿಂದಾಗಿ 16 ಸಾವಿರ ಮಂದಿ ಸಾವನ್ನಪ್ಪಿದ್ದರು. ಮಾರ್ಚ್ 2011 ರಲ್ಲಿ, 9 ತೀವ್ರತೆಯ ವಿನಾಶಕಾರಿ ಸುನಾಮಿ ಸಂಭವಿಸಿದೆ. ಆಗ ಎದ್ದ ಸುನಾಮಿ ಅಲೆಗಳು ಫುಕುಶಿಮಾ ಪರಮಾಣು ಸ್ಥಾವರವನ್ನು ನಾಶಪಡಿಸಿದ್ದವು.