ನವದೆಹಲಿ: 'ಬೆಂಗಳೂರು ಆವಿಷ್ಕಾರ ಮತ್ತು ಸಾಧನೆಗಳೊಂದಿಗೆ ನಿರೀಕ್ಷೆಗಳನ್ನು ಸಂಪರ್ಕಿಸುವ ನಗರವಾಗಿದೆ. ಬೆಂಗಳೂರು ಭಾರತದ ತಾಂತ್ರಿಕ ಸಾಮರ್ಥ್ಯಗಳನ್ನು ಜಾಗತಿಕ ಪೂರೈಕೆಗಳಿಗೆ ಸಂಪರ್ಕಿಸುತ್ತದೆ. ಬೋಯಿಂಗ್‌ನ ಈ ಹೊಸ ಕ್ಯಾಂಪಸ್ ಬೆಂಗಳೂರಿನ ಗುರುತನ್ನು ಮತ್ತಷ್ಟು ಬಲಪಡಿಸುತ್ತದೆ. ಇದು ಅಮೆರಿಕದ ಹೊರಗೆ ಬೋಯಿಂಗ್‌ನ ಅತಿದೊಡ್ಡ ಕೇಂದ್ರವಾಗಿದೆ. ಈ ಕ್ಯಾಂಪಸ್ ಭಾರತದ ಪ್ರತಿಭೆಯ ಮೇಲಿನ ವಿಶ್ವ ನಂಬಿಕೆಯನ್ನು ಬಲಪಡಿಸುತ್ತದೆ ಎಂದು ಪ್ರಧಾನಿ ಹೇಳಿದರು.
ಮುಂದೊಂದು ದಿನ ಭಾರತವೇ ಈ ಕೇಂದ್ರದಲ್ಲಿ ಭವಿಷ್ಯದ ವಿಮಾನಗಳನ್ನು ವಿನ್ಯಾಸಗೊಳಿಸಲಿದೆ. ಫೈಟರ್ ಪೈಲಟ್‌ಗಳಾಗಲಿ ಅಥವಾ ನಾಗರಿಕ ವಿಮಾನಯಾನವಾಗಲಿ ಇಂದು ಭಾರತ ಮಹಿಳಾ ಪೈಲಟ್‌ಗಳ ವಿಷಯದಲ್ಲಿ ಮುಂಚೂಣಿಯಲ್ಲಿದೆ. ಇಂದು, ಭಾರತದ ಪೈಲಟ್‌ಗಳಲ್ಲಿ ಶೇಕಡಾ 15ರಷ್ಟು ಮಹಿಳಾ ಪೈಲಟ್‌ಗಳು, ಇದು ಜಾಗತಿಕ ಸರಾಸರಿಗಿಂತ ಮೂರು ಪಟ್ಟು ಹೆಚ್ಚು ಎಂದು ಹೇಳಿದರು.
ಬೋಯಿಂಗ್‌ನ ಟೆಕ್ ಸೆಂಟರ್ (ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸೆಂಟರ್ (ಬಿಐಇಟಿಸಿ)) ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, 'ಕಳೆದ 10 ವರ್ಷಗಳಲ್ಲಿ ಭಾರತದ ವಿಮಾನಯಾನ ಮಾರುಕಟ್ಟೆ ಸಂಪೂರ್ಣ ಬದಲಾಗಿದೆ. ಇಂದು ಪ್ರತಿಯೊಬ್ಬ ವಾಯುಯಾನ ಪಾಲುದಾರರು ಹೊಸ ಶಕ್ತಿಯಿಂದ ತುಂಬಿದ್ದಾರೆ. ಭಾರತ ಇಂದು ವಿಶ್ವದ ಮೂರನೇ ಅತಿದೊಡ್ಡ ದೇಶೀಯ ವಿಮಾನಯಾನ ಮಾರುಕಟ್ಟೆಯಾಗಿದೆ. ಮುಂದಿನ ದಿನಗಳಲ್ಲಿ ದೇಶೀಯ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದೆ. ಇತರ ಬೋಯಿಂಗ್ ಮತ್ತು ಅಂತಾರಾಷ್ಟ್ರೀಯ ಕಂಪನಿಗಳು ಭಾರತದೊಂದಿಗೆ ಬೆಳೆಯಲು ಇದು ಸರಿಯಾದ ಸಮಯ ಎಂದರು.
ಈ ಬೋಯಿಂಗ್ ಸೆಂಟರ್ ಉದ್ಘಾಟನೆ ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕರ್ನಾಟಕದ ಸಾಧನೆಗೆ ಮತ್ತೊಂದು ಸಾಧನೆ ಸೇರ್ಪಡೆಯಾಗಿದೆ. ಕರ್ನಾಟಕವು ಭಾರತದಲ್ಲಿ ತಾಂತ್ರಿಕ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಅಲ್ಲದೆ, ಈ ರಾಜ್ಯವು ವಿಶ್ವದ ನಾಲ್ಕನೇ ಅತಿದೊಡ್ಡ ತಂತ್ರಜ್ಞಾನ ಕ್ಲಸ್ಟರ್ ಆಗಿದೆ. ಭಾರತದಲ್ಲಿ ನಾವೀನ್ಯತೆ ಸೂಚ್ಯಂಕದಲ್ಲಿ ಇದು ಮೊದಲ ಸ್ಥಾನದಲ್ಲಿದೆ. ಕರ್ನಾಟಕವು ಎಲ್ಲಾ ರಾಜ್ಯಗಳಿಗಿಂತ ಹೆಚ್ಚು ರಫ್ತು ಮಾಡುತ್ತದೆ ಎಂದರು.
ಬೋಯಿಂಗ್ ಕ್ಯಾಂಪಸ್:
ಬೋಯಿಂಗ್‌ನ ಈ ಕ್ಯಾಂಪಸ್ 43 ಎಕರೆಗಳಲ್ಲಿ ಹರಡಿಕೊಂಡಿದೆ ಮತ್ತು ಇದನ್ನು ನಿರ್ಮಿಸಲು 1600 ಕೋಟಿ ರೂ. ಬೋಯಿಂಗ್‌ನ ಈ ಕೇಂದ್ರವು ಅಮೆರಿಕದ ಹೊರಗೆ ಕಂಪನಿಯ ಅತಿದೊಡ್ಡ ಹೂಡಿಕೆಯಾಗಿದೆ. ಇದು ಬೆಂಗಳೂರಿನ ಹೊರವಲಯದಲ್ಲಿರುವ ದೇವನಹಳ್ಳಿಯಲ್ಲಿರುವ ಹೈಟೆಕ್ ರಕ್ಷಣಾ ಮತ್ತು ಏರೋಸ್ಪೇಸ್ ಪಾರ್ಕ್ ಕ್ಯಾಂಪಸ್ ಆಗಿದೆ. ಈ ಕೇಂದ್ರವು ಜಾಗತಿಕ ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮಕ್ಕಾಗಿ ಮುಂದಿನ ಪೀಳಿಗೆಯ ಸುಧಾರಿತ ಉತ್ಪನ್ನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸುತ್ತದೆ.
ಪ್ರಧಾನಿ ಮೋದಿ ಅವರು ಇದೇ ಕಾರ್ಯಕ್ರಮದಲ್ಲಿ ಬೋಯಿಂಗ್ ಸುಕನ್ಯಾ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದು ಹೆಚ್ಚು ಹೆಚ್ಚು ಹೆಣ್ಮಕ್ಕಳು ರಾಷ್ಟ್ರದಲ್ಲಿ ಬೆಳೆಯುತ್ತಿರುವ ವಿಮಾನಯಾನ ಕ್ಷೇತ್ರಕ್ಕೆ ಪ್ರವೇಶಿಸಲು ಉತ್ತೇಜನ ನೀಡುವ ಕಾರ್ಯಕ್ರಮವಾಗಿದೆ.
ಬೋಯಿಂಗ್ ಸುಕನ್ಯಾ ಯೋಜನೆ ಎಂದರೇನು?
ದೇಶಾದ್ಯಂತ ಹೆಚ್ಚು ಹೆಣ್ಣು ಮಕ್ಕಳು ವೈಮಾನಿಕ ವಲಯಕ್ಕೆ ಸೇರಲು ನೆರವಾಗುವ ಉದ್ದೇಶ ಹೊಂದಿರುವ ಬೋಯಿಂಗ್ ಸುಕನ್ಯಾ ಯೋಜನೆ. ಈ ಕಾರ್ಯಕ್ರಮ ಹೆಣ್ಣು ಮಕ್ಕಳಿಗೆ ಪ್ರಮುಖ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಕೌಶಲಗಳನ್ನು ಸಂಪಾದಿಸಲು ಅವಕಾಶ ಕಲ್ಪಿಸಲಿದೆ. ಹೆಣ್ಣುಮಕ್ಕಳನ್ನು ವೈಮಾನಿಕ ಉದ್ಯೋಗಗಳಿಗೆ ಸಿದ್ಧಗೊಳಿಸಲಿದೆ. ಬಾಲಕಿಯರಿಗಾಗಿ ಬೋಯಿಂಗ್ ಸುಕನ್ಯಾ ಯೋಜನೆ 150 ಸ್ಥಳಗಳಲ್ಲಿ ಕೌಶಲ್ಯ ತರಬೇತಿ ಪ್ರಯೋಗಾಲಯಗಳನ್ನು ತೆರೆಯಲಿದೆ. ವೈಮಾನಿಕ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಪಡೆಯಲು ಉತ್ತೇಜನ ನೀಡಲಿರುವ ಯೋಜನೆ. ಈ ಯೋಜನೆಯಡಿ ಪೈಲಟ್ ಆಗಲು ತರಬೇತಿ ಪಡೆಯುತ್ತಿರುವ ಬಾಲಕಿಯರಿಗೂ ವಿದ್ಯಾರ್ಥಿ ವೇತನ ಸಿಗಲಿದೆ.