ನವದೆಹಲಿ: ಜೈಲುಗಳಲ್ಲಿನ ಜಾತಿ ಆಧಾರಿತ ತಾರತಮ್ಯ ಮತ್ತು ವಿವಿಧ ಜಾತಿಗಳ ಆಧಾರದ ಮೇಲೆ ಮ್ಯಾನುಯಲ್ ಕೆಲಸಗಳ ಹಂಚಿಕೆ ತಡೆಗೆ ನಿರ್ದೇಶನ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಬುಧವಾರ ಕೇಂದ್ರ ಮತ್ತು 11 ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ, ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಇದು ಗಂಭೀರ ಸಮಸ್ಯೆಯಾಗಿದೆ ಎಂದು ಪರಿಗಣಿಸಿದ್ದು, ವಿವಿಧ ಸರ್ಕಾರಗಳಿಂದ ಪ್ರತಿಕ್ರಿಯೆಗಳನ್ನು ಕೇಳಿದೆ.
ಕೇಂದ್ರ ಸರ್ಕಾರ, ಕಾರಾಗೃಹಗಳ ಅಕಾಡೆಮಿ ಮತ್ತು ತಿದ್ದುಪಡಿ ಆಡಳಿತ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್, ಒಡಿಶಾ, ಜಾರ್ಖಂಡ್, ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ನೋಟಿಸ್ ನೀಡಿದೆ.
ಪತ್ರಕರ್ತೆ ಸುಕನ್ಯಾ ಶಾಂತಾ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್.ಮುರಳೀಧರ್, ದಲಿತರು ಪ್ರತ್ಯೇಕ ಜೈಲುಗಳಲ್ಲಿ ಹಾಗೂ ಇತರ ಕೆಲವು ಜಾತಿಗಳು ಬೇರೆ ಬೇರೆ ಪ್ರದೇಶಗಳಲ್ಲಿರುವ ಪ್ರಕರಣಗಳಿವೆ ಎಂದು ಪೀಠಕ್ಕೆ ತಿಳಿಸಿದರು.