ಬದಿಯಡ್ಕ: ಕುಂಬಳೆ ಸೀಮೆಯ ಪೆರಡಾಲ ಗ್ರಾಮದ ವಾಂತಿಚ್ಚಾಲು-ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯಲ್ಲಿ ಪಂಚವರ್ಷಗಳಿಗೊಮ್ಮೆ ನಡೆಯುವ ಧರ್ಮಕೋಲೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ನೂರಾರು ಭಕ್ತರು ಪಾಲ್ಗೊಂಡರು. ಇದರ ಅಂಗವಾಗಿ ಪ್ರಾತಃಕಾಲ ದೀಪ ಪ್ರತಿಷ್ಠೆ ಬಳಿಕ ಶ್ರೀ ದೈವದ ಭಂಡಾರ ಇಳಿಯುವುದು, ಸಾಮೂಹಿಕ ಪ್ರಾರ್ಥನೆ ಜರಗಿ ವೇದಮೂರ್ತಿ ಬ್ರಹ್ಮಶ್ರೀ ವೀರ ವೆಂಕಟ ನರಸಿಂಹ ಭಟ್ ಕಟ್ಟತ್ತಡ್ಕ ಅವರ ಪೌರೋಹಿತ್ಯದಲ್ಲಿ ಮಹಾಗಣಪತಿ ಹೋಮ, ಅಷ್ಟೋತ್ತರ ಶತಸೀಯಾಳಾಭಿಷೇಕ ಜರಗಿತು. ಶ್ರೀ ಕಿನ್ನಿಮಾಣಿ ಪೂಮಾಣಿ ಮಹಿಳಾ ಭಜನಾ ಸಂಘ ಪೆರಡಾಲ ಅವರಿಂದ ಭಜನಾ ಸಂಕೀರ್ತನೆ, ತತ್ವಮಸಿ ಕುಣಿತ ಭಜನಾ ತಂಡ ಶೇಣಿ ಮಣಿಯಂಪಾರೆ ಅವರಿಂದ ಕುಣಿತ ಭಜನಾ ಸೇವೆ ನಡೆಯಿತು. ಬಳಿಕ ಪ್ರತಿಷ್ಠಾ ಕರ್ಮಿ ಕೃಷ್ಣ ಬೆಳ್ಚಾಡ ಅವರ ಉಪಸ್ಥಿತಿಯಲ್ಲಿ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ಅವರ ನೇತೃತ್ವದಲ್ಲಿ ಚತುರ್ವಿಂಶತಿ ಕಲಶ ಕ್ಷೀರಾಭಿಷೇಕ, ವಿಶೇಷ ಪುಷ್ಪಾಲಂಕಾರದೊಂದಿಗೆ ತಂಬಿಲ ಸೇವೆ ಜರಗಿತು. ಬಳಿಕ ಶ್ರೀಮಂತ್ರಮೂರ್ತಿ ಗುಳಿಗ ದೈವದ ಕೋಲ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಗುಳಿಗ ದೈವಕ್ಕೆ ದಾನಿ, ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅವರಿಂದ ಬೆಳ್ಳಿಯ ತ್ರಿಶೂಲ ಸಮರ್ಪಣೆ ನಡೆಯಿತು.. ಕುಳೂರು ಕನ್ಯಾನ ಚಂದ್ರಹಾಸ ಶೆಟ್ಟಿ, ವಾಸ್ತು ಶಿಲ್ಪಿ ರಾಜ್ ಕುಮಾರ್, ಚಲನ ಚಿತ್ರನಟ ಸತೀಶ್ ಬಂದಲೆ ಕೃಷ್ಣಯ್ಯ ಬಲ್ಲಾಳ್, ರಾಜೇಶ್ ಆಳ್ವ ಬದಿಯಡ್ಕ, ಡಾ.ಶ್ರೀನಿಧಿ ಸರಳಾಯ, ಜಗನ್ನಾಥ ರೈ ಕೊರೆಕ್ಕಾನ, ಪ್ರಕಾಶ್ ಪೂಜಾರಿ ಗೋವಾ, ಜಯಂತ ನಡುಬೈಲ್, ಡಾ.ಸತೀಶ್ ಪುಣಿಂಚಿತ್ತಾಯ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ತುಲಾಭಾರ ಸೇವೆ, ಮಧ್ಯಾಹ್ನ 1.30ಕ್ಕೆ ಪ್ರಸಾದ, ಶ್ರೀ ದೈವದ ಅರಸಿನ ಹುಡಿ ಪ್ರಸಾದ ವಿತರಣೆ ಜರಗಿತು.