ನವದೆಹಲಿ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಹುದ್ದೆಗಳ ಭರ್ತಿಗೆ ಸಂಬಂಧಿಸಿದ ಮೀಸಲಾತಿ ಕುರಿತಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯುಜಿಸಿ) ಹೊರಡಿಸಿದ ಕರಡು ಮಾರ್ಗಸೂಚಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಹೀಗಾಗಿ ಕೇಂದ್ರ ಶಿಕ್ಷಣ ಸಚಿವಾಲಯವು 'ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಇಲ್ಲ' ಎಂದು ಭಾನುವಾರ ಸ್ಪಷ್ಟನೆ ನೀಡಿದೆ.
'ಮೀಸಲಾತಿಯಡಿ ಹುದ್ದೆ ಭರ್ತಿಯ ಬಳಿಕ ಖಾಲಿ ಉಳಿದ ಸ್ಥಾನಗಳು ಸಹ ಆಯಾ ಮೀಸಲಾತಿಗೇ ಸೀಮಿತವಾಗಿ ಉಳಿಯಲಿವೆ' ಎಂದು ತಿಳಿಸಿದೆ.
ಪರಿಶಿಷ್ಟ ಜಾತಿ/ಪಂಗಡ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಮೀಸಲಾದ ಕೋಟಾದಡಿ ಹುದ್ದೆಗಳು ಖಾಲಿ ಉಳಿದರೆ, ಅವನ್ನು ಮೀಸಲಾತಿಯಿಂದ ಹೊರತರುವ ಕುರಿತಂತೆ ಕರಡು ಮಾರ್ಗಸೂಚಿಯೊಂದನ್ನು ಬಿಡುಗಡೆಗೊಳಿಸಿದ್ದ ಯುಜಿಸಿ, ಸಾರ್ವಜನಿಕರಿಂದ ಪ್ರತಿಕ್ರಿಯೆ ಆಹ್ವಾನಿಸಿತ್ತು. ಮಾರ್ಗಸೂಚಿ ಬಿಡುಗಡೆಗೊಂಡ ನಂತರ ಎಲ್ಲೆಡೆಯಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
'ಪರಿಶಿಷ್ಟರು, ಹಿಂದುಳಿದವರು, ಬುಡಕಟ್ಟು ಜನಾಂಗದವರಿಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಹುದ್ದೆಗಳಲ್ಲಿ ನೀಡಲಾಗುವ ಮೀಸಲಾತಿಯನ್ನು ಕೊನೆಗೊಳಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪಿತೂರಿ ನಡೆಸಿದೆ' ಎಂದು ಕಾಂಗ್ರೆಸ್ ದೂರಿತ್ತು.
ಜೆಎನ್‌ಯು ವಿದ್ಯಾರ್ಥಿ ಸಂಘ ಸಹ ಯುಜಿಸಿ ಅಧ್ಯಕ್ಷ ಎಂ.ಜಗದೇಶ್ ಕುಮಾರ್ ವಿರುದ್ಧ ಪ್ರತಿಭಟಿಸಿ, ಪ್ರತಿಕೃತಿಯನ್ನು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿತ್ತು.