ಇಸ್ಲಾಮಾಬಾದ್: ಕಳೆದ ಕೆಲವು ತಿಂಗಳುಗಳಲ್ಲಿ ಪಾಕಿಸ್ತಾನದಲ್ಲಿ ಹಲವು ಮೂಲಭೂತವಾದಿಗಳನ್ನು ಹತ್ಯೆ ಮಾಡಲಾಗಿದೆ. ಈಗ ಸುನ್ನಿ ಉಲೇಮಾ ಕೌನ್ಸಿಲ್ ನಾಯಕ ಮೌಲಾನಾ ಮಸೂದ್ ಉರ್ ರೆಹಮಾನ್ ಉಸ್ಮಾನಿಯನ್ನು ಹಾಡು ಹಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಮಾಹಿತಿ ಪ್ರಕಾರ, ಆಗುಂತಕರು ದ್ವಿಚಕ್ರವಾಹನದಲ್ಲಿ ಬಂದಿದ್ದು ಉಸ್ಮಾನಿ ಕಾರಿನ ಮೇಲೆ ಗುಂಡು ಹಾರಿಸಿದರು. ಇದಾದ ನಂತರ ಉಸ್ಮಾನಿಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಈ ದಾಳಿಯ ಹೊಣೆಯನ್ನು ಇನ್ನೂ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಆದರೆ, ಕೊಲೆಯ ಹಿಂದೆ ಹಲವು ಕೋನಗಳು ಹೊರಬೀಳುತ್ತಿವೆ.
ಮೌಲಾನಾ ಉಸ್ಮಾನಿ ಭಾರತದ ವಿರುದ್ಧ ಕಿಡಿಕಾರುತ್ತಿದ್ದನು. ಆತ ಉದ್ರೇಕಕಾರಿ ಭಾಷಣಗಳಿಗೆ ಹೆಸರುವಾಸಿಯಾಗಿದ್ದರು. ಹಲವು ಬಾರಿ ಭಾರತದಲ್ಲಿ ಜಿಹಾದ್ ಬಗ್ಗೆಯೂ ಪ್ರಸ್ತಾಪಿಸಿದ್ದರು. ಭಯೋತ್ಪಾದಕ ದಾಳಿಯಲ್ಲಿ ಉಸ್ಮಾನಿಯ ಹೆಸರನ್ನು ನೇರವಾಗಿ ಉಲ್ಲೇಖಿಸಲಾಗಿಲ್ಲ.
ಈ ದಾಳಿಯಲ್ಲಿ ಇರಾನ್ ಕೈವಾಡ ಇರಬಹುದು ಎಂದೂ ಹೇಳಲಾಗುತ್ತಿದೆ. ವಾಸ್ತವವಾಗಿ, ಸುನ್ನಿ ನಾಯಕ ಉಸ್ಮಾನಿಯನ್ನು ಇರಾನ್ ವಿರೋಧಿ ಎಂದು ಪರಿಗಣಿಸಲಾಗಿದೆ. ಇರಾನ್ ಪಡೆಗಳ ಮೇಲೆ ಇತ್ತೀಚೆಗೆ ನಡೆದ ದಾಳಿಯಲ್ಲಿ ಸುನ್ನಿ ಉಗ್ರಗಾಮಿಗಳು ಭಾಗಿಯಾಗಿದ್ದರು. ಇದಲ್ಲದೇ ಒಂದು ತಿಂಗಳ ಹಿಂದೆ ಇರಾನ್‌ನ ಸಿಸ್ತಾನ್-ಬಲೂಚಿಸ್ತಾನದಲ್ಲೂ ದಾಳಿ ನಡೆದಿತ್ತು. ಇದಾದ ನಂತರ ಇರಾನ್ ಪಾಕಿಸ್ತಾನಿ ಸಂಘಟನೆಗಳ ಮೇಲೆ ದಾಳಿ ನಡೆಸಿದೆ ಎಂದು ಆರೋಪಿಸಿದೆ. ಈಗ ಅನೇಕ ತಜ್ಞರು ಉಸ್ಮಾನಿಯನ್ನು ಹತ್ಯೆ ಮಾಡುವ ಮೂಲಕ ಇರಾನ್ ಸೇಡು ತೀರಿಸಿಕೊಂಡಿರಬಹುದು ಎಂದು ಹೇಳುತ್ತಾರೆ.
ಮೌಲಾನಾ ಉಸ್ಮಾನಿ ಸುನ್ನಿ ಸಂಘಟನೆಯ ಸಿಪಾಹ್ ಸಹಬಾ ಪಾಕಿಸ್ತಾನದ ನಾಯಕ. ಇದುವರೆಗೂ ದಾಳಿಕೋರರ ಬಗ್ಗೆ ಏನೂ ತಿಳಿದುಬಂದಿಲ್ಲ ಎಂದು ಪಾಕಿಸ್ತಾನದ ಆಡಳಿತ ಹೇಳಿದೆ. ಉಸ್ಮಾನಿ ಅವರ ಕೊನೆಯ ಪ್ರಯಾಣದ ವೇಳೆಯೂ ಇರಾನ್ ವಿರುದ್ಧ ಘೋಷಣೆಗಳು ಮೊಳಗಿದವು. ಈ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಿಸಿಟಿವಿ ವೀಡಿಯೋ ಆಧರಿಸಿ ಆರೋಪಿಗಳ ಪತ್ತೆಗೆ ಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.