ನವದೆಹಲಿ: ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಮತಯಂತ್ರದ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಕಾಂಗ್ರೆಸ್ ನ ನಾಯಕ ದಿಗ್ವಿಜಯ್ ಸಿಂಗ್ ಈ ಬಗ್ಗೆ ಮಾತನಾಡಿದ್ದು, ಇವಿಎಂ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ.
ಮತದಾರರಿಗೆ ವಿವಿಪ್ಯಾಟ್ ಚೀಟಿಗಳನ್ನು ಮತಪೆಟ್ಟಿಗೆಗಳಲ್ಲಿ ಹಾಕುವ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ. ಮತಪೆಟ್ಟಿಗೆಗಳಲ್ಲಿ ಹಾಕಲಾಗುವ ಈ ಚೀಟಿಗಳನ್ನು ಎಣಿಕೆ ಮಾಡುವ ಮೂಲಕ ಚುನಾವಣಾ ಫಲಿತಾಂಶವನ್ನು ಘೋಷಿಸಬೇಕೆಂದು ದಿಗ್ವಿಜಯ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ದಿಗ್ವಿಜಯ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ದಿಗ್ವಿಜಯ್ ಸಿಂಗ್ ಇವಿಎಂ ವಿಶ್ವಾಸಾರ್ಹತೆ ಪ್ರಶ್ನಿಸುವ ಮೂಲಕ ಕರ್ನಾಟಕ ಹಾಗೂ ತೆಲಂಗಾಣದಲ್ಲಿ ತಮ್ಮ ಪಕ್ಷದ ಗೆಲುವು ಹಾಗೂ ಮಧ್ಯಪ್ರದೇಶದಲ್ಲಿ ತಮ್ಮ ಪುತ್ರನ ಗೆಲುವನ್ನೂ ಪ್ರಶ್ನಿಸುತ್ತಿದ್ದಾರಾ? ಎಂದು ಕೇಳಿದೆ.
ಭಾರತ, ಆಸ್ಟ್ರೇಲಿಯಾ, ನೈಜೀರಿಯಾ, ವೆನೆಜುವೆಲಾ ಮತ್ತು ಬ್ರೆಜಿಲ್‌ನಲ್ಲಿ ಮಾತ್ರ ಚುನಾವಣೆ ನಡೆಸಲು ಇವಿಎಂಗಳನ್ನು ಬಳಸಲಾಗುತ್ತಿದೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಆಸ್ಟ್ರೇಲಿಯಾದಲ್ಲಿ ಬಳಸಲಾಗುವ ಸಾಫ್ಟ್‌ವೇರ್ ಸಾರ್ವಜನಿಕ ಡೊಮೇನ್‌ನಲ್ಲಿದೆ ಮತ್ತು ಯಾರಾದರೂ ಅದನ್ನು ಪ್ರವೇಶಿಸಬಹುದು ಎಂದು ಸಿಂಗ್ ಹೇಳಿದ್ದಾರೆ.