ಟೋಕಿಯೋ: ಮನುಷ್ಯರು ಮಾತ್ರವಲ್ಲದೆ, ಪ್ರಾಣಿಗಳು ಸಹ ಧ್ವನಿಯೊಂದಿಗೆ ಪರಸ್ಪರ ಸಂವಹನ ನಡೆಸುತ್ತವೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಸಸ್ಯಗಳು ಮಾತನಾಡುವುದನ್ನು ಎಂದಾದರೂ ನೀವು ನೋಡಿದ್ದೀರಾ? ಜಪಾನ್ನ ವಿಜ್ಞಾನಿಗಳ ತಂಡವೊಂದು ನಂಬಲಾಗದ ಸಂಶೋಧನೆಯನ್ನು ಮಾಡಿದ್ದು, ಸಸ್ಯಗಳು ಪರಸ್ಪರ ಮಾತನಾಡುವ ದೃಶ್ಯವನ್ನು ಮೊದಲ ಬಾರಿಗೆ ಸೆರೆಹಿಡಿದಿದ್ದಾರೆ.
ಸೈನ್ಸ್ ಅಲರ್ಟ್ ಮಾಧ್ಯಮ ಪ್ರಕಾರ, ಸಸ್ಯಗಳು ಏರ್ಬೋರ್ನ್ ಸಂಯುಕ್ತಗಳ ಮಬ್ಬಿನಿಂದ ಆವರಿಸಿರುತ್ತವೆ ಮತ್ತು ಇವುಗಳನ್ನು ಬಳಸಿಕೊಂಡು ಸಂವಹನ ನಡೆಸುತ್ತವೆ. ಈ ಸಂಯುಕ್ತಗಳು ವಾಸನೆಗಳ ರೂಪದಲ್ಲಿ ಹತ್ತಿರದಲ್ಲಿ ಅಪಾಯದಲ್ಲಿರುವ ಸಸ್ಯಗಳನ್ನು ಎಚ್ಚರಿಸುತ್ತವೆ. ಈ ವೈಮಾನಿಕ ಎಚ್ಚರಿಕೆಗಳನ್ನು ಸಸ್ಯಗಳು ಯಾವ ರೀತಿಯಲ್ಲಿ ಸ್ವೀಕರಿಸುತ್ತವೆ ಮತ್ತು ಪ್ರತಿಕ್ರಿಯಿಸುತ್ತವೆ ಎಂಬುದನ್ನು ಜಪಾನ್ ವಿಜ್ಞಾನಿಗಳು ರೆಕಾರ್ಡ್ ಮಾಡಿದ ವಿಡಿಯೋ ಬಹಿರಂಗಪಡಿಸಿದೆ.
ಈ ಗಮನಾರ್ಹ ಸಾಧನೆಯನ್ನು ಜಪಾನ್ನ ಸೈತಮಾ ವಿಶ್ವವಿದ್ಯಾನಿಲಯದ ಆಣ್ವಿಕ ಜೀವಶಾಸ್ತ್ರಜ್ಞ ಮಸಾಟ್ಸುಗು ಟೊಯೋಟಾ ನೇತೃತ್ವದ ತಂಡ ಮಾಡಿದ್ದು, ಸಂಶೋಧನಾ ವರದಿಯನ್ನು ಜರ್ನಲ್ ನೇಚರ್ ಕಮ್ಯೂನಿಕೇಷನ್ನಲ್ಲಿ ಪ್ರಕಟಿಸಲಾಗಿದೆ. ಸಂಶೋಧನಾ ತಂಡದಲ್ಲಿ ಪಿಎಚ್‌ಡಿ ವಿದ್ಯಾರ್ಥಿ ಯೂರಿ ಅರಾಟಾನಿ ಮತ್ತು ಪೋಸ್ಟ್‌ಡಾಕ್ಟರಲ್ ಸಂಶೋಧಕ ಟಕುಯಾ ಉಮುರಾ ಕೂಡ ಇದ್ದರು.
ಕೀಟಗಳಿಂದ ಅಥವಾ ಇನ್ನಾವುದೇ ರೀತಿಯಲ್ಲಿ ಹಾನಿಗೆ ಒಳಗಾದ ಸಸ್ಯಗಳಿಂದ ಬಿಡುಗಡೆಯಾಗುವ ಬಾಷ್ಪಶೀಲ ಸಾವಯವ ಸಂಯುಕ್ತಗಳಿಗೆ (VOCs) ಹಾನಿಗೆ ಒಳಗಾಗದ ಸಸ್ಯವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಸಂಶೋಧನಾ ತಂಡವು ಗಮನಿಸಿದೆ. ಹಾನಿಯಾಗದ ಸಸ್ಯಗಳು, ಹಾನಿಗೊಳಗಾದ ನೆರೆಯ ಸಸ್ಯಗಳಿಂದ ಬಿಡುಗಡೆಯಾಗುವ ಬಾಷ್ಪಶೀಲ ಸಾವಯವ ಸಂಯುಕ್ತಗಳನ್ನು ಗ್ರಹಿಸಿ, ತಕ್ಷಣ ವಿವಿಧ ರಕ್ಷಣಾ ಪ್ರತಿಕ್ರಿಯೆಗಳೊಂದಿಗೆ ಎಚ್ಚರಿಕೆ ವಹಿಸುತ್ತವೆ. ಇಂತಹ ಇಂಟರ್ ಪ್ಲಾಂಟ್ ಸಂವಹನವು ಪರಿಸರ ಬೆದರಿಕೆಗಳಿಂದ ಸಸ್ಯಗಳನ್ನು ರಕ್ಷಿಸುತ್ತದೆ ಎಂದು ಲೇಖಕರು ಅಧ್ಯಯನದಲ್ಲಿ ತಿಳಿಸಿದ್ದಾರೆ.
ಸಸ್ಯಗಳ ಸಂವಹನವನ್ನು ಸೆರೆಹಿಡಿಯಲು, ವಿಜ್ಞಾನಿಗಳ ತಂಡ ಎಲೆಗಳು ಮತ್ತು ಮರಿಹುಳುಗಳ ಕಂಟೇನರ್‌ಗೆ ಜೋಡಿಸಲಾದ ಏರ್ ಪಂಪ್ ಅನ್ನು ಬಳಸಿದರು ಮತ್ತು ಇನ್ನೊಂದು ಪೆಟ್ಟಿಗೆಯಲ್ಲಿ ಸಾಸಿವೆ ಕುಟುಂಬದ ಸಾಮಾನ್ಯ ಕಳೆಯಾದ ಅರಬಿಡೋಪ್ಸಿಸ್ ಥಾಲಿಯಾನಾ ಬಳಸಿದರು. ಬಳಿಕ ಟೊಮ್ಯಾಟೊ ಸಸ್ಯ ಮತ್ತು ಅರಬಿಡೋಪ್ಸಿಸ್ ಥಾಲಿಯಾನಾದಿಂದ ಕತ್ತರಿಸಿದ ಎಲೆಗಳನ್ನು ತಿನ್ನಲು ಮರಿಹುಳುಗಳನ್ನು ಬಿಡಲಾಯಿತು. ನಂತರ ಸಂಶೋಧಕರು ಸಂವಹನವನ್ನು ಬಯೋಸೆನ್ಸರ್ ಮೂಲಕ ಸೆರೆಹಿಡಿದರು.
ಸಂಶೋಧಕರು ಅಳವಡಿಸಿದ್ದ ಬಯೋಸೆನ್ಸರ್, ಹೊಳೆಯುವ ಹಸಿರು ಮತ್ತು ಕ್ಯಾಲ್ಸಿಯಂ ಅಯಾನುಗಳನ್ನು ಎರಡೂ ಸಸ್ಯಗಳಲ್ಲಿ ಪತ್ತೆಹಚ್ಚಿದೆ. ಈ ಕ್ಯಾಲ್ಸಿಯಂ ಸಿಗ್ನಲಿಂಗ್ ಅನ್ನು ಮಾನವ ಜೀವಕೋಶಗಳು ಸಹ ಸಂವಹನ ಮಾಡಲು ಬಳಸುತ್ತವೆ. ವಿಡಿಯೋದಲ್ಲಿ ನೋಡಿದಂತೆ, ಹಾನಿಗೊಳಗಾಗದ ಸಸ್ಯಗಳು ತನ್ನ ಪಕ್ಕದಲ್ಲಿರುವ ಗಾಯಗೊಂಡ ಸಸ್ಯಗಳಿಂದ ಸಂದೇಶಗಳನ್ನು ಸ್ವೀಕರಿಸುವುದನ್ನು ಕಾಣಬಹುದು. ಎಲೆಗಳ ಉದ್ದಕ್ಕೂ ಕ್ಯಾಲ್ಸಿಯಂ ಸಿಗ್ನಲಿಂಗ್ನೊಂದಿಗೆ ಎಲೆಗಳು ಪರಸ್ಪರ ಪ್ರತಿಕ್ರಿಯಿಸಿದವು. ಹೀಗಾಗಿ ಕೆಮಿಕಲ್ಸ್ ಮೂಲಕ ಸಸ್ಯಗಳು ಸಹ ಸಂವಹನ ನಡೆಸುತ್ತವೆ ಎಂಬುದು ತಿಳಿದುಬಂದಿದೆ.