ಗುವಾಹಟಿ: ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಜನರು ಮುಕ್ತವಾಗಿ ಸಂಚರಿಸುವುದನ್ನು ತಡೆಯುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.
ಅಸ್ಸಾಂ ಪೊಲೀಸ್ ಪಡೆಗೆ ಹೊಸದಾಗಿ ರಚಿಸಲಾಗಿರುವ ಐದು ಕಮಾಂಡೊ ಬೆಟಾಲಿಯನ್‌ಗಳ ಮೊದಲ ಬ್ಯಾಚ್‌ನ ನಿರ್ಗಮನ ಪಥಸಂಚಲನದ ವೇಳೆ ಅಮಿತ್ ಶಾ ಮಾತನಾಡಿದ್ದಾರೆ.
'ಭಾರತ-ಮ್ಯಾನ್ಮಾರ್ ಗಡಿಯಲ್ಲೂ ಭಾರತ-ಬಾಂಗ್ಲಾದೇಶ ಗಡಿಯಂತೆಯೇ ಭದ್ರತೆ ಕಲ್ಪಿಸಲಾಗುವುದು. ಸರ್ಕಾರವು, ಮ್ಯಾನ್ಮಾರ್ ಜೊತೆಗಿನ ಮುಕ್ತ ಸಂಚಾರವನ್ನು ನಿಲ್ಲಿಸಲಿದೆ' ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕಳೆದ 10 ವರ್ಷಗಳಲ್ಲಿ ದೇಶದ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಭಾರಿ ಬದಲಾವಣೆಯಾಗಿದೆ ಎಂದು ಪ್ರತಿಪಾದಿಸಿರುವ ಶಾ, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಜನರು ಸರ್ಕಾರಿ ನೌಕರಿ ಗಿಟ್ಟಿಸಲು ಲಂಚ ನೀಡಬೇಕಾಗಿತ್ತು. ಆದರೆ, ಬಿಜೆಪಿ ಆಡಳಿತದಲ್ಲಿ ಉದ್ಯೋಗಕ್ಕಾಗಿ ಯಾರೂ ಒಂದೇ ಒಂದು ರೂಪಾಯಿ ಕೊಡಬೇಕಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.
'550 ವರ್ಷಗಳ ಬಳಿಕ ಶ್ರೀರಾಮ ತವರಿಗೆ'
ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮ ಮಂದಿರದಲ್ಲಿ ನಾಳೆ (ಜನವರಿ 22ರಂದು) ನಡೆಯುವ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಶಾ, 550 ವರ್ಷಗಳ ಬಳಿಕ ಶ್ರೀ ರಾಮ ತವರಿಗೆ ಮರಳಿದ್ದಾನೆ ಎಂದು ಅಭಿಪ್ರಾಯಪಟ್ಟಿದ್ದಾರೆ.
'ಇದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವ ಸಂಗತಿ' ಎಂದಿರುವ ಅವರು, ದೇಶವು ಸೂಪರ್‌ಪವರ್ ಆಗುವತ್ತ ಸಾಗಿರುವ ಹೊತ್ತಿನಲ್ಲಿ ಇದು ಸಾಧ್ಯವಾಗಿದೆ ಎಂದೂ ಒತ್ತಿ ಹೇಳಿದ್ದಾರೆ.