ಕಾಸರಗೋಡು: ಲಂಚ ಸ್ವೀಕರಿಸುತ್ತಿದ್ದ ವೇಳೆ ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ವಿಜಿಲೆನ್ಸ್ಗೆ ಸಿಕ್ಕಿಬಿದ್ದಿದ್ದಾರೆ.
ಸಮಾಜಕಾರ್ಯ ಇಲಾಖೆ ಎ.ಕೆ. ಮೋಹನ್ ಎಂಬುವವರೇ ವಿಜಿಲೆನ್ಸ್ ಬಲೆಗೆ ಸಿಲುಕಿ ಬಿದ್ದವರು. ಸಮಾಜಕಾರ್ಯ ವಿಭಾಗದಲ್ಲಿ ಅತಿಥಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಲಾಗಿದೆ.
ದೂರುದಾರರ ಉದ್ಯೋಗದ ಅವಧಿಯು ಡಿಸೆಂಬರ್ ೨೦೨೩ ರಲ್ಲಿ ಕೊನೆಗೊಳ್ಳಬೇಕಿತ್ತು. ಆಗ ಮೋಹನ್ ಅವರು ಗುತ್ತಿಗೆ ನವೀಕರಣ ಮಾಡಿಸಿ ಪಿಎಚ್ ಡಿ ಪ್ರವೇಶ ನಿಗದಿ ಮಾಡುವುದಾಗಿ ಹೇಳಿ ಎರಡು ಲಕ್ಷ ರೂಪಾಯಿ ಲಂಚ ಕೇಳಿದ್ದರು.
ಆದರೆ, ದೂರುದಾರರು ಈ ಮಾಹಿತಿಯನ್ನು ವಿಜಿಲೆನ್ಸ್ ಇಂಟಲಿಜೆನ್ಸ್ ವಿಭಾಗಕ್ಕೆ ತಿಳಿಸಿದ್ದಾರೆ. ನಂತರ ವಿಜಿಲೆನ್ಸ್ ಉತ್ತರ ವಲಯ ಪೋಲೀಸ್ ವರಿಷ್ಠಾಧಿಕಾರಿ ಪ್ರಜೀಶ್ ತೊತ್ತಿಲ್ ನೇತೃತ್ವದಲ್ಲಿ ಮೋಹನ್ ಗಾಗಿ ಬಲೆ ಬೀಸಲಾಯಿತು. ಕಾಸರಗೋಡು ವಿಜಿಲೆನ್ಸ್ ಡಿವೈಎಸ್ಪಿ ವಿ.ಕೆ.ವಿಶ್ವಂಭರನ್ ನೇತೃತ್ವದ ತಂಡ ಬುಧವಾರ ಮೊದಲ ಕಂತಿನ ೨೦,೦೦೦ ರೂ.ಗಳನ್ನು ಸ್ವೀಕರಿಸುವಾಗ ಮೋಹನ್ ಅವರನ್ನು ಬಂಧಿಸಿದೆ. ಆರೋಪಿಯನ್ನು ಕೋಝಿಕ್ಕೋಡ್ ವಿಜಿಲೆನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರ ಗಮನಕ್ಕೆ ಬಂದರೆ ವಿಜಿಲೆನ್ಸ್ ಟೋಲ್ ಫ್ರೀ ಸಂಖ್ಯೆ ೧೦೬೪ ಅಥವಾ ವಾಟ್ಸಾಪ್ ಸಂಖ್ಯೆ ೯೪೪೭೭೮೯೧೦೦ ಅಥವಾ ೮೫೯೨೯೦೦೯೦೦ ಗೆ ತಿಳಿಸುವಂತೆ ವಿಜಿಲೆನ್ಸ್ ನಿರ್ದೇಶಕ ಟಿ.ಕೆ.ವಿನೋನ್ ಕುಮಾರ್ ಮನವಿ ಮಾಡಿರುವರು.