ನವದೆಹಲಿ: ಲೋಕಸಭಾ ಚುನಾವಣೆಯಲ್ಲಿಒಗ್ಗಟ್ಟಿನಿಂದ ಸ್ಪರ್ಧಿಸುವ ಉತ್ಸಾಹ ಪ್ರದರ್ಶಿಸಿದ್ದ 'ಇಂಡಿಯಾ' ಮೈತ್ರಿಕೂಟದಲ್ಲಿ ಬುಧವಾರ ಬಿಕ್ಕಟ್ಟು ಸೃಷ್ಟಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ನೊಂದಿಗೆ ಟಿಎಂಸಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಪ್ರಕಟಿಸಿದರೆ, ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷವು (ಎಎಪಿ) ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಘೋಷಿಸಿದ್ದಾರೆ.
ಸೀಟು ಹಂಚಿಕೆ ಸಂಬಂಧ ಕಾಂಗ್ರೆಸ್‌ನ ಕೆಲವು ನಾಯಕರು ಹಾಕಿರುವ ಷರತ್ತುಗಳು, ರಾಜ್ಯದ ಕಾಂಗ್ರೆಸ್ ನಾಯಕರಿಂದ ಪಕ್ಷದ ವಿರುದ್ಧ ನಿರಂತರ ತೀಕ್ಷ್ಣ ವಾಗ್ದಾಳಿ ಹಾಗೂ ಸೀಟು ಹಂಚಿಕೆ ಪ್ರಕ್ರಿಯೆಯ ವಿಳಂಬದಿಂದ ಮಮತಾ ಕುಪಿತಗೊಂಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ 'ಭಾರತ್ ಜೋಡೋ ನ್ಯಾಯ ಯಾತ್ರೆ'ಯು ಪಶ್ಚಿಮ ಬಂಗಾಳ ಪ್ರವೇಶಿಸುವ ಮುನ್ನಾ ದಿನ ಮಮತಾ ಅವರು ತಮ್ಮ ನಿಲುವು ಪ್ರಕಟಿಸಿದ್ದಾರೆ.
ಯಾತ್ರೆ ಕುರಿತು ತಮ್ಮೊಂದಿಗೆ ಚರ್ಚಿಸುವ ಸೌಜನ್ಯವನ್ನೂ ಕಾಂಗ್ರೆಸ್ ನಾಯಕರು ತೋರಿಲ್ಲ ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಯಾತ್ರೆ ಕುರಿತು ಜನವರಿ 13ರಂದೇ ತಮಗೆ ಆಹ್ವಾನ ಬಂದಿದೆ ಎಂದು ಮಮತಾ ಸ್ಪಷ್ಟಪಡಿಸಿದ್ದಾರೆ. ಬಂಗಾಳದಲ್ಲಿನ ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಕೈ ಪಾಳಯ ವಿಫಲವಾಗಿದೆ ಎಂದು ಟಿಎಂಸಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್‌ನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಕಾಂಗ್ರೆಸ್ ನಾಯಕಿ ದೀಪಾ ದಾಸ್‌ಮುನ್ಶಿ, 'ಮಮತಾ ಅವರು ಪರೋಕ್ಷವಾಗಿ ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ' ಎಂದು ದೂರಿದ್ದಾರೆ.
'ಮಮತಾ ಅವರಿಲ್ಲದೆ ವಿಪಕ್ಷಗಳ ಮೈತ್ರಿಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಪಶ್ಚಿಮ ಬಂಗಾಳದಲ್ಲಿ ಇಂಡಿಯಾ ಮೈತ್ರಿಕೂಟ ಜತೆಗೂಡಿ ಚುನಾವಣೆ ಎದುರಿಸಲಿವೆ' ಎಂದು ಕಾಂಗ್ರೆಸ್ ಹೇಳಿದೆ. ಮಮತಾ ಅವರೊಂದಿಗೆ ಕಾಂಗ್ರೆಸ್‌ನ ಉನ್ನತ ನಾಯಕರು ಶೀಘ್ರ ಮಾತುಕತೆ ನಡೆಸುವ ಸಾಧ್ಯತೆ ಇದೆ. ಇನ್ನೊಂದೆಡೆ, ಸೀಟು ಹಂಚಿಕೆ ಕಸರತ್ತಿನ ವಿಳಂಬದ ವಿರುದ್ಧ ಜೆಡಿಯು ಸಹ ಧ್ವನಿ ಎತ್ತಿದೆ. ವಿಪಕ್ಷಗಳ ಮೈತ್ರಿಕೂಟವು ಛಿದ್ರಗೊಂಡಿದೆ ಎಂದು ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮೈತ್ರಿಯ ನಡುವೆ ಈ ಕಚ್ಚಾಟವೇಕೆ?
ಪಶ್ಚಿಮ ಬಂಗಾಳದಲ್ಲಿ 42 ಲೋಕಸಭಾ ಕ್ಷೇತ್ರಗಳಿವೆ. 2019ರ ಚುನಾವಣೆಯಲ್ಲಿ ಟಿಎಂಸಿ 22 ಕ್ಷೇತ್ರಗಳಲ್ಲಿ, ಬಿಜೆಪಿ 18ರಲ್ಲಿ ಹಾಗೂ ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಕಳೆದ ಬಾರಿ ಗೆದ್ದ ಕ್ಷೇತ್ರಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲಾಗುವುದು ಎಂದು ಟಿಎಂಸಿ ಆರಂಭದಲ್ಲೇ ತಿಳಿಸಿತ್ತು. ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಹಾಗೂ ಎಡಪಕ್ಷಗಳು ತ್ಯಾಗ ಮಾಡಿ ಸಹಕಾರ ನೀಡಬೇಕು ಎಂದೂ ಮಮತಾ ಹೇಳಿದ್ದರು. ಟಿಎಂಸಿ ಜತೆಗಿನ ಮೈತ್ರಿಗೆ ರಾಜ್ಯದ ಕಾಂಗ್ರೆಸ್ ನಾಯಕರು ಆರಂಭದಲ್ಲೇ ತಗಾದೆ ಎತ್ತಿದ್ದರು. ಕನಿಷ್ಠ 10ರಿಂದ 12 ಸ್ಥಾನಗಳನ್ನು ಪಕ್ಷಕ್ಕೆ ನೀಡಬೇಕು ಎಂದು ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದರು.
'ಕಾಂಗ್ರೆಸ್‌ಗೆ ರಾಜ್ಯದಲ್ಲಿ ನೆಲೆಯೇ ಇಲ್ಲ. ಕಾಂಗ್ರೆಸ್ 12 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ ಬಿಜೆಪಿಗೆ ಅನುಕೂಲವಾಗಲಿದೆ' ಎಂದು ಟಿಎಂಸಿ ನಾಯಕರು ಹೇಳಿದ್ದರು. ಕನಿಷ್ಠ ಪಕ್ಷ 6-7 ಸ್ಥಾನಗಳನ್ನಾದರೂ ಪಕ್ಷಕ್ಕೆ ಬಿಡಬೇಕು ಎಂದು ಕಾಂಗ್ರೆಸ್ ಒತ್ತಡ ಹೇರಿತ್ತು.
ಅಸ್ಸಾಂನಲ್ಲಿ ಎರಡು, ಮೇಘಾಲಯದಲ್ಲಿ ಒಂದು ಹಾಗೂ ಗೋವಾದಲ್ಲಿ ಒಂದು ಕ್ಷೇತ್ರಗಳಲ್ಲಿ ಟಿಎಂಸಿ ಅಭ್ಯರ್ಥಿಗಳ ಸ್ಪರ್ಧೆಗೆ ಕಾಂಗ್ರೆಸ್ ಅನುವು ಮಾಡಿಕೊಟ್ಟರೆ, ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಕ್ಷೇತ್ರ (ಒಟ್ಟು ಮೂರು) ಬಿಡಲು ಸಿದ್ಧ ಎಂದು ಟಿಎಂಸಿ ನಾಯಕರು ಕಾಂಗ್ರೆಸ್‌ಗೆ ಸಂದೇಶ ರವಾನಿಸಿದ್ದರು.
ಟಿಎಂಸಿ, ಈ ಹಿಂದೆ 2001ರ ವಿಧಾನಸಭಾ ಚುನಾವಣೆ, 2009ರ ಲೋಕಸಭೆ ಚುನಾವಣೆ ಮತ್ತು 2011ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿತ್ತು.
ಪಂಜಾಬ್‌ನಲ್ಲಿ ಏನಿದು ಜಟಾಪಟಿ?
ಪಂಜಾಬ್‌ನಲ್ಲಿ ಜತೆಗೂಡಿ ಲೋಕಸಭಾ ಚುನಾವಣೆ ಎದುರಿಸುವುದಕ್ಕೆ ಕಾಂಗ್ರೆಸ್ ಹಾಗೂ ಎಎಪಿಯ ರಾಜ್ಯ ಘಟಕಗಳು ಆರಂಭದಲ್ಲೇ ವಿರೋಧ ವ್ಯಕ್ತಪಡಿಸಿದ್ದವು. ಪಂಜಾಬ್‌ನಲ್ಲಿ ಎಎಪಿಯ ನಿಲುವು ಕಾಂಗ್ರೆಸ್‌ಗೆ ಅಚ್ಚರಿ ತಂದಿಲ್ಲ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿಯ ಅವರ ಭೇಟಿಯ ಸಂದರ್ಭದಲ್ಲಿ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್, 'ಪಂಜಾಬ್‌ನಲ್ಲಿ ಮೈತ್ರಿ ಕಷ್ಟ' ಎಂದು ಸೂಚ್ಯವಾಗಿ ಹೇಳಿದ್ದರು.
ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳ ಸೀಟು ಹಂಚಿಕೆ ಬಗ್ಗೆ ಕಾಂಗ್ರೆಸ್‌ನ ರಾಷ್ಟ್ರೀಯ ಮೈತ್ರಿ ಸಮಿತಿಯ ಸದಸ್ಯರು ಎಎಪಿ ನಾಯಕರೊಂದಿಗೆ ಇತ್ತೀಚೆಗೆ ಮಾತುಕತೆ ನಡೆಸಿದ್ದರು. ಪಂಜಾಬ್‌ನಲ್ಲಿ ಮೈತ್ರಿ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದೂ ರಾಷ್ಟ್ರೀಯ ನಾಯಕರಿಗೆ ಸ್ಪಷ್ಟಪಡಿಸಿದ್ದರು. ಪಂಜಾಬ್‌ನಲ್ಲಿ ಉಭಯ ಪಕ್ಷಗಳು ಮೈತ್ರಿ ಮಾಡಿಕೊಂಡರೆ ಬಿಜೆಪಿಗೆ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ ಎಂಬುದು ಎರಡೂ ಪಕ್ಷಗಳ ರಾಷ್ಟ್ರೀಯ ನಾಯಕರ ಆತಂಕ. ಆದರೆ, ಚಂಡೀಗಢ ಮೇಯರ್ ಚುನಾವಣೆಗೆ ಉಭಯ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಪಂಜಾಬ್‌ನಲ್ಲಿ ಬಿಜೆಪಿಗೆ ಪ್ರಬಲ ನೆಲೆ ಇಲ್ಲ. ರಾಜ್ಯದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಕಮಲ ಪಾಳಯವು ಸಿದ್ಧತೆ ನಡೆಸಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಶಿರೋಮಣಿ ಅಕಾಲಿ ದಳದೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿತ್ತು. ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಅಕಾಲಿ ದಳವು ಬಿಜೆಪಿಯಿಂದ ದೂರವಾಗಿತ್ತು.
ಸೀಟು ಹಂಚಿಕೆ ಪ್ರಸ್ತಾಪ ನಿರಾಕರಿಸಿದ ಕಾಂಗ್ರೆಸ್: ಮಮತಾ
'ನಾನು ಅವರಿಗೆ (ಕಾಂಗ್ರೆಸ್) ಸೀಟು ಹಂಚಿಕೆ ಪ್ರಸ್ತಾಪವನ್ನು ನೀಡಿದ್ದೆ. ಆದರೆ, ಅವರು ಅದನ್ನು ನಿರಾಕರಿಸಿದರು. ಹೀಗಾಗಿ, ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ನೊಂದಿಗೆ ಯಾವುದೇ ಮೈತ್ರಿ ಇಲ್ಲ. ನಮ್ಮ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮೈತ್ರಿಕೂಟವು ಒಂದು ಪಕ್ಷದ್ದಲ್ಲ. ಪ್ರಾದೇಶಿಕ ಪಕ್ಷಗಳೆಲ್ಲ ಒಟ್ಟಾಗಿರುತ್ತೇವೆ. ಕಾಂಗ್ರೆಸ್ 300 ಸ್ಥಾನಗಳಲ್ಲಿ ಏಕಾಂಗಿಯಾಗಿ ಹೋರಾಡಬೇಕು. ಉಳಿದವುಗಳನ್ನು ಪ್ರಾದೇಶಿಕ ಪಕ್ಷಗಳಿಗೆ ಬಿಟ್ಟುಕೊಡಬೇಕು. ಅಲ್ಲಿ ಅವರು ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದ್ದೇವೆ. ಅವರು ಉಳಿದ ಸ್ಥಾನಗಳಲ್ಲಿ ಹಸ್ತಕ್ಷೇಪ ಮಾಡಿದರೆ ನಾವು ಬೇರೆ ರೀತಿಯಲ್ಲಿ ಯೋಚಿಸುತ್ತೇವೆ ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ.
-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ
***
13 ಕ್ಷೇತ್ರಗಳಲ್ಲೂ ಎಎಪಿ ಗೆಲುವು: ಮಾನ್
ಪಂಜಾಬ್‌ನಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಇಲ್ಲ. ರಾಜ್ಯದಲ್ಲಿ ಎಲ್ಲ 13 ಕ್ಷೇತ್ರಗಳಲ್ಲಿ ಪಕ್ಷ ಜಯಭೇರಿ ಬಾರಿಸಲಿದೆ. 13 ಲೋಕಸಭಾ ಸ್ಥಾನಗಳಿಗೆ ಪಕ್ಷದ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಈಗಾಗಲೇ ಚರ್ಚೆಗಳು ನಡೆದಿವೆ. 40 ಸಂಭಾವ್ಯರ ಹೆಸರುಗಳು ಬಂದಿವೆ. ಪ್ರತಿ ಕ್ಷೇತ್ರಕ್ಕೆ ಮೂರರಿಂದ ನಾಲ್ಕು ಸಂಭಾವ್ಯ ಅಭ್ಯರ್ಥಿಗಳಿದ್ದಾರೆ. ಸಮೀಕ್ಷೆಗಳನ್ನು ನಡೆಸಲಾಗುವುದು. ಗೆಲುವನ್ನು ಮಾನದಂಡವಾಗಿಟ್ಟುಕೊಂಡು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುತ್ತದೆ.
-ಭಗವಂತ್ ಮಾನ್, ಪಂಜಾಬ್ ಮುಖ್ಯಮಂತ್ರಿ
***
ಮಮತಾ ಬ್ಯಾನರ್ಜಿ ಅವರು ಹುಲಿಯಂತೆ ಹೋರಾಡುತ್ತಿದ್ದಾರೆ. ಅವರ ಹೋರಾಟವು ಅವರ ರಾಜ್ಯಕ್ಕೆ ಮುಖ್ಯವಾಗಿದೆ. ಬಂಗಾಳದಲ್ಲಿ ಏಕಾಂಗಿಯಾಗಿ ಚುನಾವಣೆ ಎದುರಿಸುವ ಮಮತಾ ಅವರ ನಿರ್ಧಾರದ ಬಗ್ಗೆ ಮಾಹಿತಿ ಇಲ್ಲ.
-ಆದಿತ್ಯ ಠಾಕ್ರೆ, ಶಿವಸೇನೆ (ಉದ್ಧವ್ ಠಾಕ್ರೆ ಬಣ) ಮುಖಂಡ
'ಮಮತಾ ಬ್ಯಾನರ್ಜಿ ಅವರು ಇಲ್ಲದೆ ಇಂಡಿಯಾ ಮೈತ್ರಿಕೂಟದ ಅಸ್ತಿತ್ವವನ್ನು ಕಲ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ' ಎಂದು ಕಾಂಗ್ರೆಸ್ ಹೇಳಿದೆ. ಅಸ್ಸಾಂನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, 'ತೃಣಮೂಲ ಕಾಂಗ್ರೆಸ್ ಪಕ್ಷವು ಮೈತ್ರಿಕೂಟದ ಪ್ರಮುಖ ಆಧಾರಸ್ಥಂಭ' ಎಂದು ಹೇಳಿದರು. 'ಮಮತಾ ಬ್ಯಾನರ್ಜಿ ಅವರನ್ನು ಬಿಟ್ಟು ಇಂಡಿಯಾ ಮೈತ್ರಿಕೂಟ ಇಲ್ಲ. ಇಂಡಿಯಾ ಮೈತ್ರಿಕೂಟವು ಪಶ್ಚಿಮ ಬಂಗಾಳದಲ್ಲಿ ಸ್ಪರ್ಧಿಸಲಿದ್ದು, ಎಲ್ಲರೂ ಒಗ್ಗಟ್ಟಿನಿಂದ ಸಾಗಲಿದ್ದೇವೆ' ಎಂದು ತಿಳಿಸಿದರು.