ಕಾಸರಗೋಡು: ಕನ್ನಡ ಅರಿತರೂ, ಸರ್ಕಾರಿ ಕಚೇರಿಗಳಲ್ಲಿ ಬಹುತೇಕ ಮಂದಿ ಮಲಯಾಳದಲ್ಲೇ ವ್ಯವಹಾರ ನಡೆಸುತ್ತಿರುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗುತ್ತಿರುವ ಮಧ್ಯೆ ಮುಳಿಯಾರು ಪಂಚಾಯಿತಿಯಲ್ಲಿ ಅಲ್ಲಿನ ಕನ್ನಡಿಗರಿಗಾಗಿ ಅಧಿಕಾರಿಗಳು, ಜನಪ್ರತಿನಿಧೀಗಳು ಕನ್ನಡ ಕಲಿಕೆಗೆ ಮುಂದಾಗುವ ಮೂಲಕ ಮಾದರಿ ಮೆರೆದಿದ್ದಾರೆ. ಇದಕ್ಕಾಗಿ ಪಂಚಾಯಿತಿಯಲ್ಲಿ ಕನ್ನಡ ಕಲಿಕಾ ತರಗತಿಯನ್ನೂ ಆರಂಭಿಸಲಾಗಿದೆ.
ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಮಲಯಾಳ ಬಲ್ಲ ಅಧಿಕಾರಿಗಳು, ನೌಕರರೇ ಹೆಚ್ಚಾಗಿರುವುದರಿಂದ ಗ್ರಾಮೀಣ ಪ್ರದೇಸದ ಕನ್ನಡಿಗರಿಗೆ ಇವರಲ್ಲಿ ವ್ಯವಹಾರ ನಡೆಸುವುದೇ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆ ಮನಗಂಡ ಮುಳಿಯಾರು ಪಂಚಾಯಿತಿಯ ಮಲಯಾಳಿ ಜನಪ್ರತಿನಿಧಿಗಳು, ನೌಕರರು ಕನ್ನಡ ಕಲಿಯಲು ಮುಂದಾಗಿದ್ದಾರೆ.
ಕನ್ನಡಿಗರ ಸಂಖ್ಯೆ ಹೆಚ್ಚಾಗಿರುವ ಪಂಚಾಯಿತಿಯ ಮೂರು ಹಾಗೂ ನಾಲ್ಕನೇ ವಾರ್ಡಿನ ಜನತೆಗೆ ಕೆಲವೊಂದು ಸವಲತ್ತುಗಳ ಬಗ್ಗೆ ಮನವರಿಕೆ ಮಾಡಲು, ಅವರೊಂದಿಗೆ ಸಮವಹನ ನಡೆಸಲು ಅಧಿಕಾರಿಗಳು ಪರದಾಡಬೇಕಾಗುತ್ತಿತ್ತು. ಆದರೆ, ಪಂಚಾಯಿತಿಯ ಜನಪ್ರತಿನಿಧಿಗಳಾಗಲಿ, ನೌಕರರಾಗಲಿ ಅವರ ಮೇಲೆ ಬಲವಂತದ ಮಲಯಾಳ ಹೇರಿಕೆ ಮಾಡದೆ, ಖುದ್ದು ತಾವೇ ಕನ್ನಡ ಕಲಿತು, ಅವರೊಂದಿಗೆ ವ್ಯವಹಾರ ನಡೆಸಲು ತೀರ್ಮಾನಿಸಿದ ಹಿನ್ನೆಲೆಯಲ್ಲಿ ಕನ್ನಡ ಕಲಿಕೆಯ ತರಗತಿ ಆರಂಬಿಸಲಾಗಿದೆ.
ಸಾಕ್ಷರತಾ ಮಿಷನ್ನಿನ ಕನ್ನಡ ಸಾಕ್ಷರತಾ ಪಾಠ, ಪುಸ್ತಕ ಉಪಯೋಗಿಸಿ ಕನ್ನಡ ಕಲಿಕೆ ಆರಂಭಿಸಲಾಗಿದೆ. ಇವರಿಗಾಗಿ ಶಿಕ್ಷಕಿಯೊಬ್ಬರನ್ನೂ ನೇಮಿಸಲಾಗಿದೆ. ಕಚೇರಿ ಮಧ್ಯಾಹ್ನದ ಬಿಡುವಿನ ವೇಳೆ ತರಗತಿ ನಡೆಸಲು ತೀರ್ಮಾನಿಸಲಾಗಿದ್ದು, ಆರು ತಿಂಗಳ ಕಾಲ ತರಗತಿ ಮುಂದುವರಿಯಲಿದೆ. ಕಲಿಕೆಗೆ ತಗಲುವ ವೆಚ್ಚವನ್ನು ಸಂಪೂರ್ಣ ಪಂಚಾಯಿತಿ ವಹಿಸಿಕೊಳ್ಳಲಿದೆ.
ಅಭಿಮತ: ಒಂದು ಭಾಷೆ ಹೆಚ್ಚುವರಿಯಾಗಿ ಕಲಿತಲ್ಲಿ ಅದರ ಪ್ರಯೋಜನ ನಮಗೇ ಲಭಿಸಲಿದೆ. ಪಂಚಾಯಿತಿ ವ್ಯಾಪ್ತಿಯ ವಿವಿಧ ವಾರ್ಡುಗಳಲ್ಲಿನ ಕನ್ನಡ ಭಾಷಿಗರೊಂದಿಗೆ ಸಂವಹನ ನಡೆಸಲು, ಅವರಿಗೆ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಭಾಷೆ ತೊಡಕಾಗುತ್ತಿರುವುದನ್ನು ಮನಗಂಡು ಕನ್ನಡ ಕಲಿಕಾ ತರಗತಿ ಪಂಚಾಯಿತಿಯಲ್ಲಿ ಆರಂಭಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕವಾಗಿ ಶಿಕ್ಷಕಿಯನ್ನೂ ನೇಮಿಸಿಕೊಳ್ಳಲಾಗಿದೆ. ಆರು ತಿಂಗಳ ಕಾಲಾವಧಿಯ ಕೋರ್ಸ್ ಇದಾಗಿದೆ.
ಪಿ.ವಿ ಮಿನಿ, ಅಧ್ಯಕ್ಷೆ
ಮುಳಿಯಾರು ಗ್ರಾಮ ಪಂಚಾಯಿತಿ.