ನವದೆಹಲಿ: ಸಂಸತ್ತಿನ ಕೆಳಮನೆಯಿಂದ ತಮ್ಮನ್ನು ಉಚ್ಚಾಟಿಸಿರುವುದನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರು ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸುವಂತೆ ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ಸೂಚಿಸಿದೆ.
ನವದೆಹಲಿ: ಸಂಸತ್ತಿನ ಕೆಳಮನೆಯಿಂದ ತಮ್ಮನ್ನು ಉಚ್ಚಾಟಿಸಿರುವುದನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರು ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸುವಂತೆ ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತಾ ಅವರನ್ನೊಳಗೊಂಡ ಪೀಠ, ಮಹುವಾ ಅವರು ತಮ್ಮ ವಿರುದ್ಧದ ಉಚ್ಚಾಟನೆ ಆದೇಶಕ್ಕೆ ತಡೆ ನೀಡಿ, ಸದನದ ಕಲಾಪಗಳಿಗೆ ಹಾಜರಾಗಲು ಅನುವು ಮಾಡಿಕೊಡುವಂತೆ ಮಾಡಿದ ಮನವಿ ಬಗ್ಗೆ ಯಾವುದೇ ಆದೇಶ ನೀಡಲು ನಿರಾಕರಿಸಿತು.
'ಮಧ್ಯಂತರ ತಡೆ ಕೋರಿರುವ ನಿಮ್ಮ ಮನವಿಯನ್ನು ನಾವು ಮಾರ್ಚ್‌ನಲ್ಲಿ ಪರಿಗಣಿಸುತ್ತೇವೆ' ಎಂದು ಮಹುವಾ ಪರ ವಕೀಲ ಅಭಿಷೇಕ್ ಸಿಂಘ್ವಿ ಅವರಿಗೆ ನ್ಯಾ.ಖನ್ನಾ ತಿಳಿಸಿದ್ದಾರೆ.
ಪ್ರಧಾನ ಕಾರ್ಯದರ್ಶಿ ಪರ ವಿಚಾರಣೆಗೆ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಔಪಚಾರಿಕವಾಗಿ ಯಾವುದೇ ನೋಟಿಸ್ ನೀಡದಂತೆ ಮತ್ತು ಮಹುವಾ ಅವರ ಅರ್ಜಿಗೆ ಪ್ರತಿಕ್ರಿಯೆ ದಾಖಲಿಸುವುದಾಗಿ ಕೋರ್ಟ್‌ಗೆ ಮನವಿ ಮಾಡಿದರು.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ನೀತಿ ನಿಯಮ ಸಮಿತಿಗೆ ನೋಟಿಸ್ ನೀಡಲು ನಿರಾಕರಿಸಿದ ಕೋರ್ಟ್, ಲೋಕಸಭೆಯ ಪ್ರಧಾನ ಕಾರ್ಯದರ್ಶಿಯವರ ಪ್ರತಿಕ್ರಿಯೆಗೆ ಸೂಚನೆ ನೀಡಿದೆ.
ಮಹುವಾ ಉಚ್ಚಾಟನೆ
ಮಹುವಾ ಅವರು ತಮ್ಮ ಸಂಸತ್ ಸದಸ್ಯತ್ವದ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಅನಧಿಕೃತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುವ ಮೂಲಕ 'ಅನೈತಿಕವಾಗಿ' ನಡೆದುಕೊಂಡಿದ್ದಾರೆ. ಇದು ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಉಂಟುಮಾಡಲಿದೆ ಎಂದು ಲೋಕಸಭೆಯ ನೀತಿ ಸಮಿತಿಯು ಆರೋಪಿಸಿತ್ತು.
ಅದರಂತೆ, ಮಹುವಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸುವಂತೆ ಶಿಫಾರಸು ಮಾಡಿ, ಅದಕ್ಕೆ ಸಂಬಂಧಿಸಿದ 495 ಪುಟಗಳ ವರದಿಯನ್ನು ಡಿಸೆಂಬರ್ 8ರಂದು ಲೋಕಸಭೆಯಲ್ಲಿ ಮಂಡಿಸಿತ್ತು. ವರದಿ ಬೆನ್ನಲ್ಲೇ ಅವರನ್ನು ಉಚ್ಚಾಟಿಸಲಾಗಿತ್ತು. ಇದನ್ನು ಪ್ರಶ್ನಿಸಿ, ಮಹುವಾ ಡಿಸೆಂಬರ್ 11ರಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.