ನವದೆಹಲಿ: ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವ ತೀರ್ಪು ಪ್ರಕಟಿಸಿದ ಸಂವಿಧಾನ ಪೀಠದಲ್ಲಿದ್ದ ಐವರು ನ್ಯಾಯಮೂರ್ತಿಗಳು, ತೀರ್ಪನ್ನು ಯಾರು ಬರೆದಿದ್ದಾರೆ ಎಂಬುದನ್ನು ಬಹಿರಂಗಪಡಿಸಬಾರದು ಎಂದು ಒಕ್ಕೊರಲಿನಿಂದ ತೀರ್ಮಾನಿಸಿದ್ದರು ಎಂದು ಸಿಜೆಐ ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.
ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ಸಿಜೆಐ ಆಗಿದ್ದಾಗ ಈ ತೀರ್ಪು ಬಂದಿತ್ತು. ನ್ಯಾಯಮೂರ್ತಿ ಚಂದ್ರಚೂಡ್ ಅವರು ಆ ಸಂವಿಧಾನ ಪೀಠದಲ್ಲಿ ಇದ್ದರು. ತೀರ್ಪು ಪ್ರಕಟಿಸುವ ಮೊದಲು, ನ್ಯಾಯಮೂರ್ತಿಗಳು ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ, 'ಇದು ನ್ಯಾಯಾಲಯದ ತೀರ್ಪು ಆಗಿರಬೇಕು' ಎಂದು ತೀರ್ಮಾನಿಸಲಾಗಿತ್ತು ಎಂದಿದ್ದಾರೆ.
ಆ ತೀರ್ಪನ್ನು ಬರೆದವರು ಯಾರು ಎಂಬುದನ್ನು ಉಲ್ಲೇಖಿಸಿರಲಿಲ್ಲ. 'ಈ ಪ್ರಕರಣದಲ್ಲಿ ಸಂಘರ್ಷದ ದೀರ್ಘ ಇತಿಹಾಸ, ದೇಶದ ಇತಿಹಾಸವನ್ನು ಆಧರಿಸಿದ ವಿಭಿನ್ನ ದೃಷ್ಟಿಕೋನಗಳು ಇವೆ. ನ್ಯಾಯಾಲಯವು ಏಕಕಂಠದಲ್ಲಿ ತೀರ್ಪು ನೀಡಬೇಕು. ತೀರ್ಪು ನೀಡುವಲ್ಲಿ ನ್ಯಾಯಮೂರ್ತಿಗಳು ಒಟ್ಟಾಗಿದ್ದಾರೆ ಎಂಬ ಸಂದೇಶ ರವಾನಿಸುವುದು ಮಾತ್ರವೇ ಅಲ್ಲದೆ, ತೀರ್ಪಿನಲ್ಲಿ ನೀಡಿರುವ ಕಾರಣಗಳ ವಿಚಾರದಲ್ಲಿಯೂ ಏಕಾಭಿಪ್ರಾಯ ಇತ್ತು ಎಂಬ ಸಂದೇಶವನ್ನು ರವಾನಿಸುವ ಉದ್ದೇಶವಿತ್ತು' ಎಂದು ಅವರು ಹೇಳಿದ್ದಾರೆ.